ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆ ರೆಡ್ ಅಲರ್ಟ್ ಹಿನ್ನಲೆ ಭಾರೀ ಮಳೆ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ(ಜುಲೈ 25) ರಜೆ ಘೋಷಣೆ ಮಾಡಲಾಗಿದೆ.
ಅಂಗನವಾಡಿಯಿಂದ ದ್ವಿತೀಯ ಪಿಯುಸಿವರೆಗೆ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದಕ್ಷಿಣ ಕನ್ನಡದ ಹಲವಾರು ಭಾಗಗಳಲ್ಲಿ ಬುಧವಾರ, ರಾತ್ರಿ ಮತ್ತು ಗುರುವಾರ ಬೆಳಗಿನ ಜಾವ ಹಗಲು ರಾತ್ರಿ ಭಾರೀ ಮಳೆಯಾಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪೋಷಕರು ಮಕ್ಕಳು ತಗ್ಗು ಪ್ರದೇಶಗಳು, ಸರೋವರಗಳು, ಸಮುದ್ರ ತೀರ ಮತ್ತು ನದಿ ತೀರಗಳಿಗೆ ಹೋಗದಂತೆ ನೋಡಿಕೊಳ್ಳಬೇಕು. ಮೀನುಗಾರರಿಗೂ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಕಚೇರಿಯಲ್ಲಿ ಕಡ್ಡಾಯವಾಗಿ ಇರಬೇಕೆಂದು ತಿಳಿಸಲಾಗಿದೆ. ಜಿಲ್ಲಾಡಳಿತದಿಂದ ವಿವಿಧ ಹುದ್ದೆಗಳಿಗೆ ನೇಮಕಗೊಂಡ ನೋಡಲ್ ಅಧಿಕಾರಿಗಳು ಜಾಗರೂಕರಾಗಿರಬೇಕು ಮತ್ತು ಸಾರ್ವಜನಿಕ ದೂರುಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಲಾಗಿದೆ.


