ಬಾಗಲಕೋಟೆ : ಪಂಚಮಸಾಲಿ ಪೀಠಕ್ಕೆ ಹೊಸ ಪೀಠಾಧಿಪತಿ ಗಳ ನೇಮಕವಾಗಬೇಕೆಂದು ಕಾಂಗ್ರೆಸ್ ಶಾಸಕ ಹಾಗೂ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಕಾಶಪ್ಪನವರ್ ಆಗ್ರಹ ಮಾಡಿರುವುದನ್ನು ಬಿಜೆಪಿ ನಾಯಕರು ವಿರೋಧಿಸಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಂಚಮಸಾಲಿ ಪೀಠಾಧಿ ಪತಿ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಪಂಚಮಸಾಲಿ ಸಮಾಜದ ಅನೇಕ ಧುರೀಣರು ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಸಕ ಸಿ.ಸಿ.ಪಾಟೀಲ, ಅರವಿಂದ ಬೆಲ್ಲದ, ಸಂಸದ ಪಿ.ಸಿ.ಗದ್ದಿಗೌಡರ ಮತ್ತಿತರ ನಾಯಕರು ರವಿವಾರ ಸಂಜೆ ಸ್ವಾಮೀಜಿಯವರನ್ನು ಭೆಟ್ಟಿಯಾಗಿ ಆರೋಗ್ಯ ವಿಚಾರಿಸಿದರು. ಶ್ರೀಪೀಠಕ್ಕೆ ಸಂಬAಧಿಸಿದ ಬೆಳವಣಿಗೆಗಳ ಕುರಿತಾಗಿ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದರು
ನಮಗೆ ಪಂಚಮಸಾಲಿ ಸಮಾಜ ದೊಡ್ಡದು, ಟ್ರಸ್ಟ್ ಅಲ್ಲ. ವಿಜಯಾನಂದ ಕಾಶಪ್ಪನವರ್ ಟ್ರಸ್ಟ್ ಅಧ್ಯಕ್ಷರಾಗಿದ್ದರೂ ಪೀಠಾಧಿಪತಿ ಸ್ವಾಮೀಜಿಯೇ ಎಂದು ಶಾಸಕ ಎಚ್.ಎಸ್.ಶಿವಶಂಕರ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕರ ಭಿನ್ನಾಭಿಪ್ರಾಯದಿಂದ ಸಮಾಜಕ್ಕೆ ಪೆಟ್ಟು ಬೀಳುತ್ತಿದೆ. 2ಎ ಮೀಸಲಾತಿ ಮುಂದಿಟ್ಟುಕೊಂಡು ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ಸಮಾಜದ ಸಂಘಟನೆ ಮಾಡಿದ್ದು ಸ್ವಾಮೀಜಿ. ಬಿಜೆಪಿ ಸರ್ಕಾರ ಇದ್ದಾಗಲೂ ಸಾಕಷ್ಟು ಹೋರಾಟ ಮಾಡಿದ್ದರಿಂದ ನಮಗೆ 2ಡಿ ಮೀಸಲಾತಿ ಕೊಟ್ಟಿದ್ದರು. ಆದರೆ ನಮ್ಮ ನಾಯಕರಲ್ಲಿ ಭಿನ್ನಾಭಿಪ್ರಾಯ ಬಂದಿತ್ತು. ನಂತರ ಕಾಶಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಸರ್ಕಾರ ಬಂದ 24 ಗಂಟೆಯೊಳಗೆ ಮೀಸಲಾತಿ ಕೊಡಿಸುತ್ತೇವೆ ಎಂದು ಹೇಳಿದ್ದರು. ಆದರೆ ಇದೀಗ ಈ ಸರ್ಕಾರ ಮೀಸಲಾತಿಯನ್ನು ಕೋರ್ಟ್ನಲ್ಲಿ ಬಂಧಿಸಿದೆ ಎಂದು ಕಿಡಿಕಾರಿದರು.
ಸಮಾಜದ ಒಳಿತಿಗಾಗಿ ಹೋರಾಟ ಮಾಡಿದ ಕೂಡಲಸಂಗಮ ಮಠಕ್ಕೆ ಪರ್ಯಾಯ ಸ್ವಾಮೀಜಿಯ ಪ್ರಶ್ನೆಯೇ ಇಲ್ಲ. ಸ್ವಾಮೀಜಿ ಹಾಗೂ ಕಾಶಪ್ಪನವರ ಭೇಟಿ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಆಘಾತಕ್ಕೆ ಒಳಗಾದಾಗ ದೇಹ ಸ್ಪಂದಿಸಲ್ಲ, ಸ್ವಾಮೀಜಿ ನಾಟಕವಾಡ್ತಿದ್ದಾರೆ ಎನ್ನುವ ಕಾಶಪ್ಪನವರ್ ಹೇಳಿಕೆ ಸರಿಯಲ್ಲ. ಯತ್ನಾಳ್ ಅವರನ್ನು ಬಿಜೆಪಿಯಿಂದ ಹೊರ ಹಾಕಿದಾಗ ಸ್ವಾಮೀಜಿಯವರು ನಿಮ್ಮ ಪಕ್ಷಕ್ಕೆ ತೊಂದರೆ ಆಗುತ್ತೆ ಉಚ್ಚಾಟನೆ ಮಾಡಬೇಡಿ ಎಂದಿದ್ದರು. ಇದರಲ್ಲಿ ರಾಜಕೀಯ ಬೆರೆಸಿ ಸ್ವಾಮೀಜಿಯವರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದರು.
ಸಂಸದ ಪಿ.ಸಿ.ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ, ರಾಜಶೇಖರ ಶೀಲವಂತರ ಅವರೂ ಪ್ರತ್ಯೇಕ ವಾಗಿ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಶ್ರೀಪೀಠಕ್ಕೆ ಹೊಸಪೀಠಾಧಿಪತಿ ನೇಮಕಾತಿ ಕುರಿತು ಶಾಸಕ ವಿಜಯಾನಂದ ಕಾಶಪ್ಪನವರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಸ್ವಾಮೀಜಿ ನಿರಾಕರಿಸಿದರು. ಊಟದಲ್ಲಿ ವ್ಯತ್ಯಾಸವಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು ಎಂದರು. ಕಾಶಪ್ಪನವರ ಅವರ ಕುರಿತಾದ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಸ್ವಾಮೀಜಿ ನಿರಾಕರಿಸಿದರು.


