ಬೆಂಗಳೂರು : ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿರುವ ಬಿ.ಸರೋಜಾದೇವಿ ಮೃತ ಪಟ್ಟಿದ್ದಾರೆ. ಹಿರಿಯ ನಟಿ ಬಿ. ಸರೋಜಾದೇವಿ ಅವರು 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಸೋಮವಾರ (ಜುಲೈ 14) ಅವರು ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಮುಂಜಾನೆ 8.30ರ ಸುಮಾರಿಗೆ ಅವರು ನಿಧನರಾದರು ಎಂಬುದು ತಿಳಿಯಿತು. ಜುಲೈ 15ರಂದು ಬಿ. ಸರೋಜಾದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ.
‘ಮಹಾಕವಿ ಕಾಳಿದಾಸ’ ಸಿನಿಮಾದ ಮೂಲಕ 1955ರಲ್ಲಿ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆಗ ಅವರಿಗೆ 17ರ ಪ್ರಾಯವಾಗಿತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲದೇ ತಮಿಳು, ಹಿಂದಿ, ತೆಲುಗು ಭಾಷೆಯ ಸಿನಿಮಾಗಳಲ್ಲಿ ಕೂಡ ಸರೋಜಾ ದೇವಿ ನಟಿಸಿದ್ದರು. 200ಕ್ಕೂ ಅಧಿಕ ಸಿನಿಮಾಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದರು.
ದಕ್ಷಿಣ ಭಾರತದ ಧೀಮಂತ ಅಭಿನೇತ್ರಿ. ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಭೂಷಣ ಪುರಸ್ಕೃತರಾಗಿರುವ ಸರೋಜಾದೇವಿ ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಹಿರಿಯ ನಟಿ ಬಿ.ಸರೋಜಾ ದೇವಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.