ನವದೆಹಲಿ : ಇದುವರೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ದಿಗ್ಗಜ ನಾಯಕರುಗಳ ಹೆಸರುಗಳು ಕೇಳಿ ಬರುತ್ತಿರುವಾಗಲೇ ರಾಷ್ಟ್ರೀಯ ಅಧ್ಯಕ್ಷನ್ನಾಗಿ ಮಹಿಳೆಯೊಬ್ಬರನ್ನು ನೇಮಿಸಬೇಕೆಂಬ ಒತ್ತಾಯಗಳು ಬಿಜೆಪಿಯಲ್ಲಿ ಪ್ರಬಲವಾಗಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಇದುವರೆಗೂ ಯಾವೊಬ್ಬ ಮಹಿಳೆಯು ಕೆಲಸ ಮಾಡಿಲ್ಲ. ಪ್ರಧಾನಿ ನರೇಂದ್ರಮೋದಿ ಅವರ ನಾರಿಶಕ್ತಿ ಚಿಂತನೆಗೆ ಬಲ ತುಂಬುವ ನಿಟ್ಟಿನಲ್ಲಿ ರಾಷ್ಟ್ರೀಯ ಮಹಿಳಾ ಅಧ್ಯಕ್ಷ ಸ್ಥಾನಕ್ಕೆ ಪ್ರಥಮ ಬಾರಿಗೆ ಮಹಿಳೆಯೊಬ್ಬರನ್ನು ಪರಿಗಣಿಸಬೇಕು ಎಂಬ ಒತ್ತಡಗಳು ಹೆಚ್ಚಿವೆ. ಈ ನಡುವೆ ಆರ್‌ಎಸ್‌ಎಸ್ ಸಹ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಹಿಳೆಯರನ್ನು ಆಯ್ಕೆ ಮಾಡಲು ಸಮ್ಮತಿಸಿದೆ ಎಂದು ತಿಳಿದು ಬಂದಿದೆ.
ಮಹಿಳೆಯೊಬ್ಬರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಮಹಿಳಾ ಮತದಾರರ ಒಲವು ಗಳಿಸುವ ಜೊತೆಗೆ ಬಿಜೆಪಿಯ ಮಹಿಳಾ ಅಭಿವೃದ್ಧಿಯ ಬದ್ಧತೆಯನ್ನು ಪ್ರದರ್ಶಿಸಿದಂತಾಗುತ್ತದೆ. ಬಿಜೆಪಿ ಮಹಿಳೆಯರ ಪರ ಇದೆ ಎಂಬ ಸAದೇಶವನ್ನು ನೀಡಿದಂತಾಗುತ್ತದೆ. ಹಾಗಾಗಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಹಿಳೆಯರನ್ನು ನೇಮಿಸಿ ಎಂಬ ಕೂಗು ಬಿಜೆಪಿಯಲ್ಲಿ ಪ್ರಬಲವಾಗಿ ಕೇಳಿ ಬಂದಿದೆ.
ದಕ್ಷಿಣ ಭಾರತಕ್ಕೆ ಸೇರಿದ ಬಿಜೆಪಿಯ ನಾಯಕಿಯೊಬ್ಬರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎಂಬ ಒತ್ತಾಯವೂ ಇದ್ದು, ತಮಿಳುನಾಡು ಮೂಲದ ನಾಯಕಿಯೊಬ್ಬರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ತಮಿಳುನಾಡಿನಲ್ಲೂ ಪಕ್ಷವನ್ನು ಬಲಪಡಿಸಬಹುದೆಂಬ ಲೆಕ್ಕಾಚಾರವೂ ಬಿಜೆಪಿಯಲ್ಲಿ ನಡೆದಿದೆ. ಅದರಂತೆ ಈ ಬಾರಿಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಬಿಜೆಪಿಯ ನಾಯಕರುಗಳಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,ಡಿ. ಪುರಂದರೇಶ್ವರಿ, ವನತಿ ಶ್ರೀನಿವಾಸನ್ ಸೇರಿದಂತೆ ಹಲವು ಹೆಸರುಗಳು ಕೇಳಿ ಬರುತ್ತಿವೆ. ನಿರ್ಮಲಾಸೀತಾರಾಮನ್ ಅವರು ತಮಿಳುನಾಡು ಮೂಲದವರಾಗಿದ್ದು, ವಿತ್ತ ಸಚಿವೆಯಾಗಿ ಕಳೆದ 6 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪುರಂದರೇಶ್ವರಿ ಅವರು ಆಂಧ್ರಮೂಲದವರಾಗಿದ್ದು, ಅಂದ್ರ ಪ್ರದೇಶ ಬಿಜೆಪಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಬಿಜೆಪಿ ರಾಷ್ಟ್ರೀಯ ಮಹಿಳಾಮೋರ್ಚಾದ ಅಧ್ಯಕ್ಷರಾಗಿರುವ ವನತಿ ಶ್ರೀನಿವಾಸನ್ ಸಹ ತಮಿಳುನಾಡು ಮೂಲದವರಾಗಿದ್ದು, ಕಳೆದ ಚುನಾವಣೆಯಲ್ಲಿ ನಟ ಕಮಲ್‌ಹಾಸನ್ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಯನ್ನು ಯಾರು ಅಲಂಕರಿಸುತ್ತಾರೆ ಎನ್ನುವುದು ಇದುವರೆಗೂ ಖಚಿತವಾಗಿಲ್ಲ. ಆದರೆ, ಬಿಜೆಪಿ ತನ್ನ ಮೊದಲ ಬಾರಿಗೆ ಮಹಿಳೆಯರನ್ನು ಅಧ್ಯಕ್ಷರ ಆಯ್ಕೆಯನ್ನು ಮಾಡುವ ಸಾಧ್ಯತೆಗಳಿವೆ. ಭಾರತೀಯ ಜನತಾ ಪಕ್ಷದ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ನಂತರ ಇದೀಗ ಬಿಜೆಪಿ ತನ್ನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯತ್ತ ಗಮನ ಕೇಂದ್ರೀಕರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.