ಉಳ್ಳಾಲ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ಇದರ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಫೆ.11 ಮತ್ತು 12 ರಂದು ರಾಷ್ಟ್ರೀಯ ಮಟ್ಟದ “ಎ” ಗ್ರೇಡ್ “ಇರಾ ಕಬಡ್ಡಿ-2023” ಮತ್ತು ಸಾಂಸ್ಕೃತಿಕ ಕಲಾ ವೈಭವ ಇರಾ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ಸುಖೇಶ್ ಭಂಡಾರಿ ಮಾಹಿತಿ ನೀಡಿದರು.
ಫೆ.11 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕರಾದ ಗಣೇಶ್ ರಾವ್,ಶಾಸಕರಾದ ಯು.ಟಿ ಖಾದರ್,ವೇದವ್ಯಾಸ ಕಾಮತ್, ಮಂಜೇಶ್ವರ ಶಾಸಕ ಎ.ಕೆ.ಎಮ್ ಅಶ್ರಫ್ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶ್ರೀದೇವಿ ಎಜ್ಯುಕೇಷನ್ ಟ್ರಸ್ಟ್ ನ ಎ.ಸದಾನಂದ ಶೆಟ್ಟಿ,ಸಂಸದ ನಳಿನ್ ಕುಮಾರ್ ಕಟೀಲ್,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು,ಶಾಸಕ ವೈ.ಭರತ್ ಶೆಟ್ಟಿ,ರೋಹನ್ ಕಾರ್ಪೊರೇಷನ್ ನ ರೋಹನ್ ಮೊಂತೇರೊ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಫೆ.12 ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈರಂಗಳ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ ರಾಜಾರಾಮ್ ಭಟ್ ಉದ್ಘಾಟಿಸಲಿದ್ದಾರೆ.ಅಂದು ಬೆಳಿಗ್ಗೆ 11.00ಕ್ಕೆ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಹಾಗೂ ಜನ್ಸಾಲೆ ರಾಘವೇಂದ್ರ ಆಚಾರ್ಯ ಸಾರಥ್ಯದಲ್ಲಿ ಬಡಗು ಮತ್ತು ತೆಂಕು ಶೈಲಿಯ ಯಕ್ಷಗಾನ ನಾಟ್ಯ ವೈಭವ ಹಾಗೂ ಮಧ್ಯಾಹ್ನ 2 ರಿಂದ ಜಿಲ್ಲೆಯ ಖ್ಯಾತ 10 ತಂಡಗಳಿಂದ ಡ್ಯಾನ್ಸ್ ಇರಾ ಡ್ಯಾನ್ಸ್ ನೃತ್ಯ ಸ್ಪರ್ಧೆ ಜರಗಲಿದೆ ಎಂದರು.
ಸಂಘದ ಸದಸ್ಯ ಸುಪ್ರೀತ್ ಭಂಡಾರಿ ಮಾತನಾಡಿ ಭಾರತ್ ಫ್ರೆಂಡ್ಸ್ ಇರಾ ಕಬ್ಬಡ್ಡಿ ತಂಡವು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹಲವೆಡೆ ಪ್ರಶಸ್ತಿಗಳನ್ನು ಪಡೆದು ಖ್ಯಾತಿಯನ್ನು ಪಡೆದುಕೊಂಡಿದೆ.ನಿರಂತರ ಸ್ಥಳೀಯ ಯುವಕರ ತಂಡ ಸೇರಿಕೊಂಡು ಕಬ್ಬಡ್ಡಿ ಆಟ ತರಬೇತಿ ಜೊತೆಗೆ ನಿತ್ಯ ಕಬಡ್ಡಿ ಆಟವೂ ಕ್ಲಬ್ ಮೈದಾನದಲ್ಲಿ ನಡೆಯುತ್ತಿದೆ.ತಂಡ ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಕೊರೊನಾ ಸಂದರ್ಭ ಅಶಕ್ತ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ಪೂರೈಸಿರುವ ಹೆಮ್ಮೆಯಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ತಂಡಕ್ಕೆ ಇತ್ತೀಚೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿರುವುದರಿಂದ ತಂಡದ ಗೌರವ ಹೆಚ್ಚಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎಫ್ ಸಿ ಇರಾ ಅಧ್ಯಕ್ಷ ಲತೇಶ್ ಕಲ್ಲಾಡಿ, ಕೋಶಾಧಿಕಾರಿ ಗಣೇಶ್ ಶೆಟ್ಟಿ ಮೇಗಿನಬೈಲು, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ರಾಜಶೇಖರ್ ರೈ ಇರಾಗುತ್ತು ಉಪಸ್ಥಿತರಿದ್ದರು.