ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬುಧವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಮಕ್ಕಳು ಬೆಳೆಸಿದ ತರಕಾರಿಯನ್ನು ನೀಡಿದರು. ಮಕ್ಕಳೊಂದಿಗೆ ಕೆಲ ಕಾಲ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು ಶಾಲೆಯಲ್ಲಿ ಮಕ್ಕಳು ನಡೆಸುವ ಕೃಷಿ ಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶೀಘ್ರವೇ ಶಾಲೆಗೂ ಭೇಟಿ ನೀಡುವುದಾಗಿ ತಿಳಿಸಿದರು.

ಈ ವೇಳೆ ಶಾಲಾಭಿವೃದ್ಫಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಎ. ಎನ್, ಹಳೆ ವಿದ್ಯಾರ್ಥಿ ಸಂಘದ ಶಿವರಾಜ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಹಾಗೂ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಬಳಿಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಯತೀಶ್ ಅವರನ್ನು ಭೇಟಿ ಮಾಡಿ ಅವರಿಗೂ ವಿದ್ಯಾರ್ಥಿಗಳು ತರಕಾರಿ ನೀಡಿದರು.ವಾರದ ಹಿಂದೆ ಈ ಶಾಲೆಯ ಮಕ್ಕಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಮೂಲಕ ಭೇಟಿ ಮಾಡಿ ಶಾಲೆಯಲ್ಲಿ ಬೆಳೆದ ತರಕಾರಿ ನೀಡಿದ್ದರು. ಮುಖ್ಯಮಂತ್ರಿ ಅವರು ಶಾಲೆಗೆ 2 ಕಂಪ್ಯೂಟರ್ ಹಾಗೂ ಒಂದು ಪ್ರೊಜೆಕ್ಟರ್ ಗಿಫ್ಟ್ ನೀಡಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಾಭಾಗೀತ್ವದಲ್ಲಿ ಅಕ್ಟೋಬರ್ 23,2018 ರಂದು ಈ ಶಾಲೆಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿತ್ತು. ಈ ಶಾಲೆಯಲ್ಲಿ ಆಗ ವಿದ್ಯಾರ್ಥಿಗಳ ಸಂಖ್ಯೆ 38 ಇದ್ದು ಈಗ 100 ಸನಿಹದಲ್ಲಿದೆ.