ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದಲ್ಲಿ ನಿನ್ನೆ ನಡೆದ ಸಚಿವ ಸಂಪುಟದಲ್ಲಿ ನಂದಿನಿ ಹಾಲು ಹಾಗೂ ಮೊಸರು ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ನಂದಿನಿ ಹಾಲು ಮತ್ತು ಮೊಸರು ಪ್ರತಿ ಲೀಟರ್ ಬರೋಬ್ಬರಿ 4 ರೂಪಾಯಿ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ನಿನ್ನೆಯೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಜನರಿಗೆ ವಿದ್ಯುತ್ ಶಾಕ್ ಕೊಟ್ಟಿದೆ.ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಅಧಿಕೃತ ಆದೇಶ ಹೊರಡಿಸಿದ್ದು, ಪರಿಷ್ಕೃತ ವಿದ್ಯುತ್ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ. ಮುಂದಿನ ಮೂರು ವರ್ಷಗಳಿಗೆ ದರ ಏರಿಕೆ ಮಾಡಿ ಪಟ್ಟಿ ಆದೇಶಿಸಿದೆ.
ಯೂನಿಟ್‌ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಎಸ್ಕಾಂಗಳು ಕೆಇಆರ್‌ಸಿ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆಯಂತೆ ಉತ್ಪಾದನೆಯ ಖರ್ಚು-ವೆಚ್ಚ ಮತ್ತು ನಿರ್ವಹಣೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹೀಗಾಗಿ ಇಂದು (ಮಾರ್ಚ್ 27) ಕೆಇಆರ್‌ಸಿ ಅಧಿಕೃತವಾಗಿ ಪ್ರತಿ ಯೂನಿಟ್ ವಿದ್ಯುತ್‌ಗೆ 36 ಪೈಸೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್ 1 ರಿಂದಲೇ ಹೊಸ ದರ ಜಾರಿಯಾಗಲಿದ್ದು, ರಾಜ್ಯದ ಜನರಿಗೆ ವಿದ್ಯುತ್ ದರದ ಬಿಸಿ ತಟ್ಟಲಿದೆ.
ಇತ್ತೀಚೆಗಷ್ಟೇ ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವೂ ಹೆಚ್ಚಿಸಲಾಗಿತ್ತು ಒಟ್ಟಿನಲ್ಲಿ ಸರಕಾರ ನೀಡುವ ಭಾಗ್ಯಗಳಿಗೆ ಜನಸಾಮಾನ್ಯರು ತಲೆಕೆಡಿಸಿಕೊಂಡಂತಹ ಪರಿಸ್ಥಿತಿ ಉಂಟಾಗಿದೆ.


