ಬೆಂಗಳೂರು : ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದು, ಪಕ್ಷದ ಚೌಕಟ್ಟಿನಲ್ಲೇ ಈ ವಿಚಾರವನ್ನು ಚರ್ಚಿಸದೇ ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ್ದಕ್ಕೆ ಹೈಕಮಾಂಡ್ ಕೆಂಡಮಂಡಲವಾಗಿದೆ. ಹಾಗಾಗಿ ಈ ಪ್ರಕರಣದ ದೂರು ಸಲ್ಲಿಕೆ ವಿಳಂಬವಾಗಿದೆ.
ಹನಿಟ್ರ್ಯಾಪ್ ಪ್ರಕರಣದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹೈಕಮಾಂಡ್ ಅಸಮಾಧಾನಗೊಂಡಿರುವುದರಿಂದ ಈ ಪ್ರಕರಣದ ದೂರು ಸಲ್ಲಿಕೆಗೂ ಮುನ್ನ ಹೈಕಮಾಂಡ್ ಜತೆ ಚರ್ಚಿಸಿಯೇ ದೂರು ಸಲ್ಲಿಸುವ ಕೆಲಸಗಳು ಆಗಲಿವೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಪ್ರಕರಣವನ್ನು ಪ್ರಸ್ತಾಪಿಸುವ ಬದಲು ಪಕ್ಷದ ಚೌಕಟ್ಟಿನಲ್ಲೇ ಇದನ್ನು ಚರ್ಚೆ ಮಾಡಬಹುದಿತ್ತು. ಸದನದಲ್ಲಿ ಈ ವಿಚಾರ ಚರ್ಚಿಸಿರುವುದು ಸರಿಯಲ್ಲ ಎಂದು ಹೇಳಿರುವುದರಿಂದ ಈ ಪ್ರಕರಣದ ದೂರು ಸಲ್ಲಿಕೆ ತಡವಾಗಿದೆ. ಹೈಕಮಾಂಡ್ ಜತೆ ಚರ್ಚಿಸಿ, ಅವರ ಗಮನಕ್ಕೆ ತಂದ ನಂತರವೇ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಹಕಾರ ಸಚಿವ ರಾಜಣ್ಣನವರು ದೂರು ಸಲ್ಲಿಸುವರು ಎಂದು ಹೇಳಲಾಗಿದೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣನವರ ಹನಿಟ್ರ್ಯಾಪ್ ಪ್ರಕರಣ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದ್ದು, ಸಂಸತ್ತಿನಲ್ಲೂ ಬಿಜೆಪಿ ಈ ಪ್ರಕರಣವನ್ನು ಪ್ರಸ್ತಾಪಿಸಿ, ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಲು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಹೈಕಮಾಂಡ್ ಈ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿಸಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣನವರು ಇನ್ನು 2-3 ದಿನಗಳಲ್ಲಿ ಹನಿಟ್ರ್ಯಾಪ್ ಬಗ್ಗೆ ದೂರು ನೀಡುತ್ತೇನೆ ಎಂದು ಈಗಾಗಲೇ ಹೇಳಿದ್ದಾರೆ. ಹೈಕಮಾಂಡ್ ಹನಿಟ್ರ್ಯಾಪ್ ಪ್ರಕರಣದಲ್ಲಿ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಜತೆ ಚರ್ಚಿಸಿದ ನಂತರವೇ ದೂರು ನೀಡಲು ಸಚಿವ ರಾಜಣ್ಣ ತೀರ್ಮಾನಿಸಿದ್ದಾರೆ ಎನ್ನಲಾಗಿದ್ದು, ಬುಧವಾರ ಅಥವಾ ಗುರುವಾರ ಹೈಕಮಾಂಡ್ ಒಪ್ಪಿಗೆ ಪಡೆದ ನಂತರ ಅವರು ದೂರು ಸಲ್ಲಿಸುವರು ಎಂದು ಹೇಳಲಾಗಿದೆ.
ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಇವರಿಬ್ಬರು ಈಗಾಗಲೇ ಪ್ರತ್ಯೇಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಈ ಪ್ರಕರಣದ ಸಾಕ್ಷ್ಯಗಳನ್ನು ಮುಖ್ಯಮಂತ್ರಿಗಳಿಗೆ ತೋರಿಸಿದ್ದಾರೆ. ಮುಖ್ಯಮಂತ್ರಿಗಳು ಹೈಕಮಾಂಡ್ ಜತೆ ಮಾತನಾಡಿ ದೂರು ನೀಡುವ ಬಗ್ಗೆ ತೀರ್ಮಾನ ಮಾಡೋಣ ಎಂದು ಹೇಳಿರುವ ಹಿನ್ನೆಲೆಯಲ್ಲಿ ದೂರು ಸಲ್ಲಿಕೆ ತಡವಾಗಿದೆ.
ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ವಕೀಲರೊಂದಿಗೆ ಚರ್ಚಿಸಿ ಮತ್ತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೈಕಮಾಂಡ್ ಜತೆಯೂ ಮಾತನಾಡಿ ಸಚಿವ ರಾಜಣ್ಣನವರು ದೂರು ಸಲ್ಲಿಸುತ್ತಾರೆ ಎಂದು ಹೇಳಲಾಗಿದೆ. ವರದಿ ಕೇಳಿದ ಹೈಕಮಾಂಡ್ ಹನಿಟ್ರ್ಯಾಪ್ ಪ್ರಕರಣ ದೊಡ್ಡಸುದ್ದಿಗೆ ಕಾರಣವಾಗಿರುವ ಬೆನ್ನಲ್ಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ರಣದೀಪ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.


