ವಿಜಯನಗರ ; ದೇಗುಲದ ಮುಂದಿನ ಪ್ರಾಂಗಣವನ್ನು ದುಷ್ಕರ್ಮಿಗಳು ನಿಧಿ ಆಸೆಗೆ ಅಗೆದು ಧ್ವಂಸಗೊಳಿಸಿದ ಘಟನೆ ಹಗರಿಬೊಮ್ಮನ ಹಳ್ಳಿ ತಾಲೂಕಿನ ಚಿಲುಗೋಡು ಗ್ರಾಮದ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇಗುಲದ ಬಳಿ ನಡೆದಿದೆ.
ಸುಮಾರು 11ನೇ ಶತಮಾನದ ಪುರಾತನ ದೇವಸ್ಥಾನ ಇದಾಗಿದ್ದು,ಹಿಂದೆ ರಾಜರ ಆಳ್ವಿಕೆಯಲ್ಲಿ ದೇಗುಲಗಳಲ್ಲಿ ನಿಧಿ ಸಂಗ್ರಹಿಸಿಟ್ಟಿರಬಹುದೆಂಬ ಮೌಢ್ಯತೆಯಿಂದ ಈ ದೇವಸ್ಥಾನವನ್ನು ಅಗೆದು ನಿಧಿಚೋರರು ವಿರೂಪಗೊಳಿಸಿದ್ದಾರೆ.
ಒಂದೊಮ್ಮೆ ಗರ್ಭಗುಡಿ ಆವರಣದಲ್ಲಿ ಅಗೆದು ಶೋಧಿಸಿದ್ದರು, ಗರ್ಭಗುಡಿ ಮುಂದಿನ ಪ್ರಾಂಗಣದಲ್ಲಿ ಇದು ಮೂರನೇ ಬಾರಿ ಅಗೆದಿದ್ದಾರೆ. ದೇಗುಲದಲ್ಲಿನ ಬೃಹತ್ ಗಾತ್ರದ ಬಂಡೆ ಸರಿಸಿ ನಾಲ್ಕೈದು ಅಡಿಯಲ್ಲಿ ಮಣ್ಣು ತೆಗೆದು ನಿಧಿ ಇರುವ ಶಂಕೆಯಿಂದ ಕಳ್ಳರು ಶೋಧಿಸಿದ್ದಾರೆಂದು ತಿಳಿದಿದೆ. ಶೋಧನೆ ಬಳಿಕ ಕಳ್ಳರಿಗೆ ಏನಾದರೂ ಸಿಕ್ಕಿದಿಯೋ, ಇಲ್ಲವೋ ಗೊತ್ತಿಲ್ಲ ಆದರೆ ನಿರಂತರ ದೇಗುಲದ ಮೇಲೆ ದಾಳಿ ಮಾತ್ರ ನಿಂತಿಲ್ಲ ಎಂಬುದು ಸ್ಥಳೀಯರು ತಿಳಿಸಿದ್ದಾರೆ.


