ಮಂಗಳೂರು : ನೂರಾರು ವರ್ಷಗಳ ಹಿಂದಿನಿಂದ ನಂಬಿಕೊಂಡು ಬಂದಿರುವ MRPL ಕಂಪೌಂಡ್‌ಗೆ ಹೊಂದಿಕೊಂಡಿರುವ ಕುತ್ತೆತ್ತೂರಿನ ಕಾಯರ್ ಕಟ್ಟೆಯಲ್ಲಿ ಪಿಲಿಚಾಮುಂಡಿ ದೈವ ನೆಲೆಯಾಗಿದೆ. 18 ವರ್ಷಗಳಿಂದ ಗಡು ಪ್ರದೇಶದಲ್ಲಿ ನೇಮ ನಡೆಯುವುದೇ ನಿಂತಿತ್ತು. ಅದ್ಯಾವಾಗ ನೇಮ ನಡೆಯುವುದು ನಿಂತಿತ್ತೋ ಅಲ್ಲಿಂದ ಸಂಕಷ್ಟ ಶುರುವಾಗಿತ್ತು. ಇಲ್ಲಿನ ಗ್ರಾಮಸ್ಥರು ಹಾಗೂ MRPL ಕಂಪೆನಿಗೆ ಸಮಸ್ಯೆಗಳು ಆರಂಭವಾದವು. ಇದಕ್ಕೆಲ್ಲ ದೈವದ ಕೋಪ ಕಾರಣ ಎನ್ನಲಾಗಿತ್ತು. ಪ್ರಶ್ನಾಚಿಂತನೆ ನಡೆದು ಮತ್ತೆ ದೈವಾರಾಧನೆ ಆರಂಭಗೊಂಡು ನೇಮವೂ ನಡೆದಿತ್ತು. ಆದ್ರೆ, ಇದೀಗ MSEZ ವಶದಲ್ಲಿರುವ ಜಾಗದಲ್ಲಿ ಕಾಂತೇರಿ ಜುಮಾದಿ ದೈವದ ಆರಾಧನೆಗೆ ಅಧಿಕಾರಿಗಳು ತಡೆ ಒಡ್ಡಿದ್ದಾರೆ.ಸಿನಿಮಾದ ಕಥೆಯಲ್ಲಿ ಕಾಡಿನಲ್ಲಿ ನಡೆಯುವ ದೈವಾರಾಧನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುವುದನ್ನು ತೋರಿಸಲಾಗಿತ್ತು. ಈಗ ಅಂತಹದ್ದೇ ಘಟನೆ ಮಂಗಳೂರು ಬಜ್ಪೆ ಸಮೀಪ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಸುಮಾರು 3 ಸಾವಿರ ಎಕರೆ ಭೂಮಿ ಎಂಎಸ್ಇಝಡ್ ವಶವಾದರೂ ಕಾಂತೇರಿ ಜುಮಾದಿ ದೈವಸ್ಥಾನ ಉಳಿದಿತ್ತು. ಸ್ಮಾರಕದ ರೀತಿಯಲ್ಲಿ ಉಳಿದುಕೊಂಡ ದೈವಸ್ಥಾನದಲ್ಲಿ ವರ್ಷಕ್ಕೊಂದು ಬಾರಿ ಉತ್ಸವ ಹಾಗೂ ಪ್ರತಿ ಸಂಕ್ರಮಣಕ್ಕೆ ದೈವಕ್ಕೆ ವಿಶೇಷ ಸೇವೆಗೆ ಅವಕಾಶ ನೀಡಲಾಗಿತ್ತು. 2006 ರಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ವೇಳೆ ಬಜಪೆ ಸಮೀಪ ಮೂರು ಸಾವಿರ ಎಕ್ರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ವೇಳೆ ಅನೇಕ ದೇವಸ್ಥಾನ , ದೈವಸ್ಥಾನ , ಚರ್ಚ್, ಮಸೀದಿಗಳು ನೆಲಸಮವಾಗಿ ಹೋಗಿತ್ತು. ಆದ್ರೆ ಹಲವು ಹೋರಾಟದ ಫಲವಾಗಿ ನೆಲ್ಲಿದಡಿ ಗುತ್ತಿಗೆ ಸೇರಿದ ಕಾಂತೇರಿ ಜುಮಾದಿ ದೈವಸ್ಥಾನ ಉಳಿದುಕೊಂಡಿತ್ತು
ಇನ್ನು ಕಾಂತಗೇರಿ ಜುಮಾದಿ ದೈವಸ್ಥಾನ ಬಹಳಷ್ಟು ಕಾರಣಿಕ ಶಕ್ತಿ ಹೊಂದಿದೆ. ಇಲ್ಲಿರುವ ಬಾವಿಯ ಸ್ಫಟಿಕ ಶುದ್ಧದಂತಿರುವ ತೀರ್ಥ ಕುಡಿದರೆ ಕ್ಷಣಾರ್ಧದಲ್ಲಿ ಮೈಗೆ ಏರಿದ ವಿಷ ಇಳಿಯುತ್ತದೆ ಎಂಬ ನಂಬಿಕೆ ಇದೆ. ಈ ಬಾವಿಯ ತೀರ್ಥ, ಇಲ್ಲಿನ ಒಂದು ಚಿಟಿಕೆ ಮಣ್ಣನ್ನು ಜುಮಾದಿ ದೈವದ ಹೆಸರು ಹೇಳಿ ಕೊಟ್ಟರೆ ಜೀವ ಉಳಿಯುತ್ತದೆ ಎಂಬ ನಂಬಿಕೆ ಇದೆ. ಒಟ್ಟಿನಲ್ಲಿ ತುಳನಾಡ ನಂಬಿಕೆಯ ವಿಚಾರದಲ್ಲಿ ಅಧಿಕಾರಿಗಳ ಈ ದಬ್ಬಾಳಿಕೆ ವಿರುದ್ಧ ಉಗ್ರ ಹೋರಾಟಕ್ಕೆ ಜನರು ಮುಂದಾಗಿದ್ದಾರೆ.ಆದರೆ ತುಳುನಾಡಿನ ಮಣ್ಣಿನಲ್ಲಿ ದೈವಾರಾಧನೆಗೆ ಮಹತ್ವ ಹೆಚ್ಚಿದ್ದು ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ ಆರಾಧನೆ ನಿಲ್ಲಿಸಿದ್ರೆ ಮುಂದೇನು ಕಾಡಲಿದೆಯೋ ಎಂಬ ಭಯ ಊರಿನ ಜನರಿಗೆ ಆವರಿಸಿದೆ.