Monday, July 14, 2025
Flats for sale
Homeಜಿಲ್ಲೆಮಂಗಳೂರು : ಮಾನವ ಜಾತಿಗಿಂತ ದೊಡ್ಡ ಜಾತಿಯೇ ಇಲ್ಲ : 76 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ...

ಮಂಗಳೂರು : ಮಾನವ ಜಾತಿಗಿಂತ ದೊಡ್ಡ ಜಾತಿಯೇ ಇಲ್ಲ : 76 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ “ಸಹಕಾರ ರತ್ನ” ಡಾ.ಎಂ.ಎನ್ ರಾಜೇಂದ್ರ ಕುಮಾರ್ …!

ಮಂಗಳೂರು : ಸಹಕಾರರತ್ನ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 76ನೇ ಹುಟ್ಟುಹಬ್ಬದ ಸಂಭ್ರಮ, ಅಭಿನಂದನಾ ಕಾರ್ಯಕ್ರಮ ಮತ್ತು ಅರ್ಹರಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ ಸೋಮವಾರ ಬ್ಯಾಂಕ್ ನಲ್ಲಿ ಜರುಗಿತು.

ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಹುಟ್ಟುಹಬ್ಬದ ಅಭಿನಂದನೆ ಸ್ವೀಕರಿಸಿ ಮಾತಾಡಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, “ಮಾನವ ಜಾತಿಗಿಂತ ದೊಡ್ಡ ಜಾತಿಯೇ ಇಲ್ಲ. ಅದೇ ನನ್ನ ಜಾತಿ. ಎಲ್ಲರನ್ನೂ ಸಮಾನವಾಗಿ ಕಾಣುತ್ತ ಯುವಕರಿಗೆ ಮಾರ್ಗದರ್ಶನ ನೀಡುವ ನನಗೆ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ಗುರುಗಳು. ಬೇರೆ ಬ್ಯಾಂಕ್ ಗಳಲ್ಲಿ ವಸೂಲಾತಿ ಎನ್ನುವ ಪದ ಬಳಕೆ ಮಾಡುತ್ತಾರೆ. ಆದರೆ ಕಳೆದ 29 ವರ್ಷಗಳಲ್ಲಿ ನಮ್ಮ ಬ್ಯಾಂಕ್ ನಿಂದ ರೈತರಿಗೆ ಕೊಟ್ಟಿರುವ ಸಾಲ ನೂರಕ್ಕೆ ನೂರು ಮರುಪಾವತಿಯಾಗಿದೆ. ನಾವು 7 ಜಿಲ್ಲೆಗಳಲ್ಲಿ ಜನರಿಗೆ ಸಾಲ ಕೊಡುತ್ತಿದ್ದೇವೆ. ನಿಜವಾದ ಮೈಕ್ರೋ ಫೈನಾನ್ಸ್ ನಿಂದ ಯಾರಿಗೂ ಸಮಸ್ಯೆಯಾಗಿಲ್ಲ. ತೆಲಂಗಾಣ, ಆಂಧ್ರ ಪ್ರದೇಶದಿಂದ ಬಂದವರು ಒಬ್ಬೊಬ್ಬರಿಗೆ ನೀಡುತ್ತಿರುವುದು ಮೈಕ್ರೋ ಫೈನಾನ್ಸ್ ಸಾಲ. ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ಗಮನ ಕೊಡಬೇಕು. ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ರೈತ ಆರ್ಥಿಕ ಸಾಲ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಮನುಷ್ಯನಿಗೆ ವಯಸ್ಸು ಎಷ್ಟು ಎನ್ನುವುದು ಮುಖ್ಯವಲ್ಲ ಅವನು ಸಮಾಜದಲ್ಲಿ ಹೇಗೆ ಬದುಕುತ್ತಾನೆ, ಎಷ್ಟು ಜನರಿಗೆ ನೆರವಾಗಿದ್ದಾನೆ ಅನ್ನುವುದು ಅಷ್ಟೇ ಮುಖ್ಯವಾಗುತ್ತದೆ“ ಎಂದರು.
ಬಳಿಕ ಮಾತಾಡಿದ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು, “ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ ರಾಯರು ಕಟ್ಟಿರುವ ಸಹಕಾರಿ ಕ್ಷೇತ್ರದಲ್ಲಿ ಉತ್ತುಂಗದಲ್ಲಿರುವ ಹೆಸರು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರದ್ದು. ಮೊಳಹಳ್ಳಿ ಶಿವರಾಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಹಕಾರಿ ಕ್ಷೇತ್ರವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ರಾಜೇಂದ್ರ ಕುಮಾರ್ ಅವರ ದೃಢ ನಿರ್ಧಾರ ಮತ್ತು ಆಡಳಿತ ವೈಖರಿ ಇತರರಿಗೆ ಮಾದರಿ. ಇಡೀ ದೇಶದಲ್ಲಿ ಹೆಚ್ಚು ಕಿಸಾನ್ ಕಾರ್ಡ್ ಕೊಟ್ಟಿರುವ ಹಿರಿಮೆ ಎಸ್ ಸಿಡಿಸಿಸಿ ಬ್ಯಾಂಕ್ ನದ್ದು. ಮಹಿಳಾ ಸಂಘಟನೆ ಆ ಮೂಲಕ ಮಹಿಳೆಯರನ್ನು ಸಶಕ್ತಗೊಳಿಸಿರುವ ನಿಮಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ“ ಎಂದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತಾಡಿ, ”ರಾಜೇಂದ್ರ ಕುಮಾರ್ ಅವರು ಶತಮಾನವನ್ನು ಕಾಣುವಂತಾಗಲಿ. ಅಜಾತಶತ್ರುವಾಗಿ ಸಹಕಾರಿ ರಂಗದಲ್ಲಿ ಗುರುತಿಸಿಕೊಂಡಿರುವ ರಾಜೇಂದ್ರ ಕುಮಾರ್ ಅವರಿಂದ ಸಹಕಾರಿ ಕ್ಷೇತ್ರ ಶ್ರೀಮಂತವಾಗಲಿ. 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರಾಜೇಂದ್ರ ಕುಮಾರ್ ಅವರು ಧಾರ್ಮಿಕ, ಶೈಕ್ಷಣಿಕ, ಉದ್ಯಮ ಕ್ಷೇತ್ರಗಳಲ್ಲೂ ಸೇವೆಗೈದವರು“ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಇದೇ ವೇಳೆ ಕೋಟೆಕಾರ್ ಬ್ಯಾಂಕ್ ದರೋಡೆಯನ್ನು ಭೇದಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹಾಗೂ ತಂಡವನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಇಂದ್ರಾಳಿ ಜಯಕರ ಶೆಟ್ಟಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ., ಕಣಚೂರು ವಿದ್ಯಾಸಂಸ್ಥೆಯ ಸಂಸ್ಥಾಪಕ ಕಣಚೂರು ಮೋನು, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ, ಮೇಘರಾಜ್ ಜೈನ್, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಯರಾಮ್ ರೈ, ಬಿ.ಆರ್. ರಮೇಶ್, ಬ್ಯಾಂಕ್ ನಿರ್ದೇಶಕ ವಿನಯ್ ಕುಮಾರ್ ಸೂರಿಂಜೆ, ಟಿ.ಜಿ.ರಾಜಾರಾಮ್ ಭಟ್, ಭಾಸ್ಕರ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಬ್ಯಾಂಕ್ ನಿರ್ದೇಶಕ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶಶಿಕುಮಾರ್ ರೈ ಬೊಳ್ಯೊಟ್ಟು ಧನ್ಯವಾದ ಸಮರ್ಪಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.ರವೀಂದ್ರ ಪ್ರಭು ಪ್ರಾರ್ಥಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular