ಬರಹ : ನಿತ್ಯಾನಂದ ವಿವೇಕವಂಶಿ
ಬೆಂಗಳೂರು : ಸಿನಿಮಾ ಮುಗಿದ ಸಾಕಷ್ಟು ಕ್ಷಣಗಳು ಕಳೆದರೂ ಜನ ಸೀಟಿನಿಂದೇಳಲು ಸಿದ್ಧವಿಲ್ಲ. ನೀರವ ಮೌನದಲ್ಲೂ ಮಡುಗಟ್ಟಿದ ಭಾವೋದ್ವೇಗ. ಕೆಲವರು ದುಃಖ ತಡೆಯಲಾರದೇ ಬಿಕ್ಕುತ್ತಿದ್ದರೆ. ಇನ್ನು ಕೆಲವರು ಇದೇನಾಗಿ ಹೋಯಿತು ಎಂಬಂತೆ ದಿಘ್ಭ್ರಾಂತಿಯಲ್ಲಿ ಮುಳುಗಿದ್ದಾರೆ. ಕೆಲವರು ನಿಜ ಪ್ರಪಂಚಕ್ಕೆ ತಕ್ಷಣ ವಾಪಾಸು ಬಂದ ಶಾಕ್ ನಲ್ಲಿದ್ದರೆ ಇನ್ನು ಕೆಲವರು ಹೊಸದಾದ ಸತ್ಯವೊಂದನ್ನು ಕಂಡುಕೊಂಡು ಆಳವಾದ ಆತ್ಮವಿಮರ್ಶೆಯಲ್ಲಿ ಮುಳುಗಿರುವಂತೆ ಕಾಣುತ್ತಾರೆ. ಇದು ಛಾವಾ ಸಿನಿಮಾದ ಕೊನೆಯಲ್ಲಿ ಥಿಯೇಟರ್ ನಲ್ಲಿ ನನಗೆ ಕಂಡ ದೃಶ್ಯ.
ಸಿನಿಮಾ ನೋಡಿ ಅದಾಗಲೇ 3 – 4 ದಿನಗಳು ಕಳೆದು ಹೋದವು. ಫಸ್ಟ್ ಡೇ ಫಸ್ಟ್ ಶೋ ನೋಡಿ ರಿವ್ಯೂ ಬರೀಬೇಕು ಅಂತಾನೇ ಸಿನಿಮಾಗೆ ಹೋಗಿದ್ದು. ಮೂರೂವರೆ ನಿಮಿಷದ ಟ್ರೈಲರ್ ನೋಡಿದ್ದರಿಂದ ಸಿನಿಮಾ ಅದ್ಭುತವಾಗೇ ಇದೆ ಅಂತ ಗೊತ್ತಿತ್ತು. ಆದರೆ ರೀವ್ಯೂ ಬರೆಯೋದು ನನ್ನ ಮುಖ್ಯ ಉದ್ದೇಶವಾಗಿತ್ತು. ಆದರೆ ಸಿನಿಮಾ ನೋಡಿದ ಕ್ಷಣದಿಂದ ಮನಸ್ಸು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿಬಿಟ್ಟಿದೆ. ಈಗಲೂ ಅಕ್ಷರಗಳನ್ನು ಪೂರ್ಣಮನಸ್ಸಿನಿಂದ ಟೈಪಿಸಲು ಆಗುತ್ತಿಲ್ಲ. ಸಿನಿಮಾದ ಹ್ಯಾಂಗೋವರ್ ನಿಂದ ಹೊರಬರಲೇ ಆಗುತ್ತಿಲ್ಲ. ನಿಜ ಹೇಳಬೇಕೆಂದರೆ ನಾನು ಸಿನಿಮಾ ಒಂದನ್ನು ನೋಡಿದ್ದೇನೆ ಅಂತಾನೇ ಅನ್ನಿಸುತ್ತಿಲ್ಲ. ಬದಲಾಗಿ ಟೈಮ್ ಮೆಷೀನ್ ನಲ್ಲಿ ಕೂತು ಇತಿಹಾಸದ ಕಾಲಗರ್ಭದಲ್ಲಿ ಹಿಂದೆ ಹೋಗಿ ಹದಿನೇಳನೇ ಶತಮಾನದ ಕೊನೆಯ ಭಾಗದ ಎಂಟು ಒಂಭತ್ತು ವರ್ಷಗಳನ್ನು ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟಗಳಲ್ಲಿ ಕಳೆದು ಬಂದೆನೇನೋ, ಔರಂಗಜೇಬನ ಕ್ರೌರ್ಯಕ್ಕೆ, ವೀರ ಸಾಂಭಾಜಿಯ ಅಂತ್ಯಕ್ಕೆ ನಾನೂ ಸಾಕ್ಷಿಯಾಗಿದ್ದೆನೇನೋ ಅನ್ನಿಸುತ್ತಿದೆ.
ಇಂತಹುದೊಂದು ಸಿನಿಮಾ ಬರಬೇಕಿತ್ತು. ಇತಿಹಾಸದಲ್ಲಿ ಮುಚ್ಚಿಹಾಕಿದ ಅದೆಷ್ಟೋ ಸತ್ಯಗಳನ್ನು ಹೊರತೆಗೆಯಲು ಇಂತಹ ಒಂದು ಪ್ರಯತ್ನ ಆಗಲೇಬೇಕಿತ್ತು. ಧರ್ಮದ ರಕ್ಷಣೆಗಾಗಿ ಅದೆಷ್ಟು ಜನ ತಮ್ಮ ಸರ್ವಸ್ವವನ್ನೂ ಅರ್ಪಿಸಿದ್ದಷ್ಟೇ ಅಲ್ಲದೇ ಅದೆಂತಾ ಯಮಯಾತನೆಯನ್ನು ಅನುಭವಿಸಬೇಕಾಯಿತು ಎಂಬುದರ ಅರಿವು ಭಾರತೀಯರಾದ ನಮಗೆ ಖಂಡಿತವಾಗಿ ಇಲ್ಲ. ಸ್ವಾತಂತ್ರ್ಯ ಹೋರಾಟವೆಂದರೆ ಬರೀ ಗಾಂಧೀಜಿಯವರ ಉಪವಾಸ ಸತ್ಯಾಗ್ರಹ, ಅಹಿಂಸೆ, ಶಾಂತಿ ಎಂದು ಭಾವಿಸಿರುವ ಹೆಚ್ಚೆಂದರೆ ಬ್ರಿಟಿಷರ ವಿರುದ್ಧ ಮಾತ್ರ ನಡೆದ ಹೋರಾಟದ ಅರಿವಿರುವ ನಮ್ಮವರಿಗೆ ಮುಸಲ್ಮಾನ ಆಕ್ರಮಣಕಾರರ ವಿರುದ್ಧ ನಡೆದ ರೋಚಕ ಇತಿಹಾಸ ಗೊತ್ತಿಲ್ಲ. ರಜಪೂತರ ಮೇಲೆ, ಸಿಖ್ಖರ ಮೇಲೆ, ನಮ್ಮದೇ ವಿಜಯನಗರ ಸಾಮ್ರಾಜ್ಯದ ಮೇಲೆ, ಅವರು ನಡೆಸಿದ ಭೀಭತ್ಸ ದಬ್ಬಾಳಿಕೆ ಮತ್ತು ಎಲ್ಲೆ ಮೀರಿದ ಹಿಂಸೆಯ ಕಥೆಗಳನ್ನು ಕೇಳಿಲ್ಲ.
ಮಾತೆತ್ತಿದರೆ ಜಾತ್ಯಾತೀತತೆ ಎನ್ನುವ ಸೋಗಲಾಡಿಗಳು ಸತ್ಯ ಹೇಳಿಬಿಟ್ಟರೆ ಕೋಮುಸೌಹಾರ್ದ ಹದಗೆಟ್ಟು ಹೋಗುವುದು ಎಂಬ ಗುಮ್ಮನನ್ನು ತೋರಿಸಿ ಅನಾದಿ ಕಾಲದಿಂದಲೂ ಇತಿಹಾಸದ ಕುರಿತು ಜಾಣಗುರುಡು ಪ್ರದರ್ಶಿಸುತ್ತಾ, ಓಲೈಕೆ ಇತಿಹಾಸ ಬರೆದು, ಓದಿಸಿ ಜನರನ್ನು ನಿರ್ವೀರ್ಯರನ್ನಾಗಿಸಿಬಿಟ್ಟಿರುವ ಇಂತಹಾ ಸಂದರ್ಭದಲ್ಲಿ ಛತ್ರಪತಿ ಸಾಂಭಾಜಿ ಮಹಾರಾಜರ ಹೋರಾಟದ ಕುರಿತಾದ ಸಿನಿಮಾ ಬಂದಿರುವುದು ನಿಜಕ್ಕೂ ಅದ್ಭುತ ಬೆಳವಣಿಗೆ. ಅದರಲ್ಲೂ ದೇಶ ವಿರೋಧಿ – ಧರ್ಮವಿರೋಧಿ ಚಿಂತನೆಗಳ ಮುಳ್ಳಿನ ಗಿಡಗಳನ್ನೇ ಬೆಳೆಸುತ್ತಾ ದೇಶಭಕ್ತಿಯ ಹೂವುಗಳನ್ನು ಬೆಳೆಸುವ ವಿಷಯದಲ್ಲಿ ಮರುಭೂಮಿಯಂತಾಗಿದ್ದ ಬಾಲಿವುಡ್ ನಲ್ಲಿ ಅಪರೂಪಕ್ಕೆ ಉಕ್ಕಿದ ಓಯಸಿಸ್ ಚಿಲುಮೆ ಈ ಸಿನಿಮಾ ಎನ್ನಬಹುದು. ಪದ್ಮಾವತಿ, ಸಾವರ್ಕರ್, ರಜಾಕಾರ್, ಕಾಶ್ಮೀರ ಫೈಲ್ಸ್, ಕೇರಳ ಫೈಲ್ಸ್, ಸಾಬರಮತಿ ಮುಂತಾದ ಸತ್ಯವನ್ನು ಬಿಚ್ಚಿಟ್ಟ ಇತ್ತೀಚಿನ ಕೆಲವು ದಿಟ್ಟ ಸಿನಿಮಾಗಳ ಸಾಲಿಗೆ ಈ ಚಿತ್ರವೂ ಸೇರುತ್ತದೆ.
ಛಾವಾ! ಅಂದರೆ ಮರಿ ಸಿಂಹ. ಲಯನ್ ಕಿಂಗ್ – ಮುಫಾಸಾಗಳನ್ನು ನೋಡಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ನಿಜವಾದ ಸಿಂಹದ ಮರಿಯನ್ನು ಈ ಸಿನಿಮಾ ತೋರಿಸಿದೆ ಎಂದರೆ ತಪ್ಪಾಗಲಾರದು. ಸತ್ಯ ಹೇಳಬೇಕೆಂದರೆ ಈ ಸಿನಿಮಾ ನೋಡಿ ದೊಡ್ಡವರಿಗೇ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಮಕ್ಕಳಿಗಂತೂ ಬಹಳ ಕಷ್ಟ. ಥಿಯೇಟರ್ ಒಂದರಲ್ಲಿ ಛತ್ರಪತಿಗೆ ಜಯಕಾರ ಹಾಕುವ ಸಂದರ್ಭದಲ್ಲಿ ಹುಡುಗನೊಬ್ಬ ಕಣ್ಣೀರು ಹಾಕುತ್ತಿದ್ದ ದೃಶ್ಯ ವೈರಲ್ ಆಗುತ್ತಿರುವುದನ್ನು ನೀವು ಗಮನಿಸಿರಬಹುದು. ಅರಗಿಸಿಕೊಳ್ಳಲು ಕಷ್ಟವಾದರೂ ಈ ಸತ್ಯವನ್ನು ಮಕ್ಕಳಿಗಲ್ಲದಿದ್ದರೂ ಕಡೇ ಪಕ್ಷ ಯುವಕರಿಗಾದರೂ ಹೇಳಲೇಬೇಕಾಗಿದೆ. ಸರ್ವೇ ಭವಂತು ಸುಃಖಿನಃ ಹೇಳುವ ಹಿಂದುಗಳಿಗೆ ಯಾಕಾಗಿ ಇಂತಹಾ ಕ್ರೌರ್ಯವನ್ನು ಎದುರಿಸಬೇಕಾಯಿತು ಎಂಬ ಪಾಠವನ್ನು ಇಂದೇ ಹೇಳದಿದ್ದರೆ ಅದೇ ಮಾದರಿಯ ಕ್ರೌರ್ಯವನ್ನು ಅನುಭವಿಸಲು ತುಂಬಾ ವರ್ಷಗಳು ಕಾಯಬೇಕಿಲ್ಲ ಎನ್ನುವುದು ಅಕ್ಷರಶಃ ಸತ್ಯ.
ಛಾವಾ! ಛತ್ರಪತಿ ಶಿವಾಜಿ ಮಹಾರಾಜ ಸಿಂಹವಾದರೆ ಅವನ ಮಗ ಛತ್ರಪತಿ ಸಾಂಭಾಜಿ ಮಹಾರಾಜ ಸಿಂಹದ ಮರಿ. ಕೇವಲ ಶಿವಾಜಿಯ ಮಗನಾಗಿದ್ದಕ್ಕೆ ಛತ್ರಪತಿಯಾದ ಸಾಂಭಾಜಿ ಸಾಯುವ ವೇಳೆಗೆ ಸಾಂಭಾಜಿಯ ಅಪ್ಪ ಶಿವಾಜಿ ಎನ್ನುವ ಕೀರ್ತಿಯನ್ನು ತಂದೆಗೆ ತಂದುಕೊಟ್ಟ. ಇತಿಹಾಸವನ್ನು ಹೇಳಲು ಹೊರಟರೆ ಲೇಖನ ತುಂಬಾ ಉದ್ದವಾಗಿಬಿಡುತ್ತದೆ. ಹೀಗಾಗಿ ಸಂಕ್ಷಿಪ್ತವಾಗಿ ಹೇಳಿ ಮುಗಿಸುತ್ತೇನೆ. ಶಿವಾಜಿ ಹುಟ್ಟುವ ಕಾಲಕ್ಕೆ ಉತ್ತರದಲ್ಲಿ ಮೊಘಲರು, ದಕ್ಷಿಣದಲ್ಲಿ ಕುತುಬ್ ಶಾಹಿ, ನಿಜಾಮಶಾಹಿ, ಆದಿಲ್ ಶಾಹಿಗಳ ನಡುವೆ ಅಖಂಡ ಭಾರತದ ರಾಜಕೀಯ ಅಧಿಕಾರ ಹಂಚಿಕೆಯಾಗಿಬಿಟ್ಟಿತ್ತು. ಹಿಂದು ಎನ್ನುವ ಉಸಿರೆತ್ತಲೂ ಒಂದು ಸಂಸ್ಥಾನ ಚಿಗುರದ ಕಾಲವಾಗಿತ್ತು. ಇನ್ನೇನು ಹಿಂದು ಧರ್ಮ ಸತ್ತೇಹೋಯಿತು ಎನ್ನುವಾಗ ಜನ್ಮ ತಾಳಿದ್ದು ಶಿವಾಜಿ. ಪವಾಡದಂಥಾ ಜೀವನವನ್ನು ನಡೆಸಿದ ಈತನ ಕಾರಣದಿಂದ ಹಿಂದವಿ ಸ್ವರಾಜ್ಯದ ಕಲ್ಪನೆ ಮರಾಠರ ಮನಸ್ಸಿನಲ್ಲಿ ಚಿಗುರೊಡೆಯಿತು. ಶಿವಾಜಿಯ ದೈವೀ ವರ್ಚಸ್ಸಿನಿಂದ ಸ್ವಾಮಿ ಭಕ್ತ ಸ್ವರಾಜ್ಯ ನಿಷ್ಠ ವೀರ ಮರಾಠರ ತ್ಯಾಗ ಬಲಿದಾನಗಳಿಂದ ಸಹ್ಯಾದ್ರಿಯ ಬೆಟ್ಟಗಳಲ್ಲಿ ಸ್ವರಾಜ್ಯ ಕುಸುಮ ಅರಳಿಯೇಬಿಟ್ಟಿತು. ಮುಸಲ್ಮಾನ ರಾಜ್ಯಗಳ ಮಗ್ಗುಲಲ್ಲೇ ಹಿಂದವಿ ಸ್ವರಾಜ್ಯ ಸೌಧ ಗಟ್ಟಿಯಾದ ತಳಹದಿಯೊಂದಿಗೆ ಎದ್ದು ನಿಂತಿತ್ತು.
ಇಡೀ ಭಾರತವನ್ನು ತಾನೊಬ್ಬನೇ ಆಳಬೇಕು ಮತ್ತು ಎಲ್ಲವನ್ನೂ ಇಸ್ಲಾಮೀಕರಣಗೊಳಿಸಬೇಕೆಂದು ಕನಸು ಕಾಣುತ್ತಾ ಅದಕ್ಕಾಗಿ ಎಂತಹಾ ಕ್ರೌರ್ಯವನ್ನೂ ಮೆರೆಯಲು ಸಿದ್ಧನಾಗಿ ನಿಂತಿದ್ದ ಮೊಘಲ್ ಚಕ್ರವರ್ತಿ ಔರಂಗಜೇಬನಿಗೆ ಇದನ್ನು ಸಹಿಸಲು ಹೇಗಾದರೂ ಸಾಧ್ಯ?? ಇಡೀ ದೇಶವನ್ನು ಗೆದ್ದ ಬಾದಶಾಹನಿಗೆ ಸಹ್ಯಾದ್ರಿ ಬೆಟ್ಟದ ಪುಟ್ಟ ಶಿವಾಜಿಯನ್ನು ಸೋಲಿಸಲಾಗಲಿಲ್ಲ ಎಂಬುದೇ ಬಹುದೊಡ್ಡ ತಲೆನೋವಾಗಿದ್ದ ಸಂದರ್ಭದಲ್ಲಿ ಅವನ ಸಂತಸಕ್ಕೆ ಕಾರಣವಾಗಬಹುದಿದ್ದ ಸುದ್ದಿಯೊಂದು ಕಿವಿಗೆ ಬಿತ್ತು. ಅದೇ ಶಿವಾಜಿಯ ಸಾವು. ಈ ಸಿನಿಮಾ ಆರಂಭವಾಗುವುದೇ ಅಲ್ಲಿಂದ. ಶಿವಾಜಿಯ ನಂತರ ಮರಾಠರ ಹುಟ್ಟಡಗಿಸಿ ಹಿಂದವಿ ಸ್ವರಾಜ್ಯದ ನಾಮ್ ಔರ್ ನಿಶಾನ್ (ಹೆಸರು ಮತ್ತು ಗುರುತು) ಅನ್ನು ಅಳಿಸಿಹಾಕಿಬಿಡುವ ಹುಮ್ಮಸ್ಸಿನಲ್ಲಿದ್ದವನಿಗೆ ಮರ್ಮಾಘಾತ ನೀಡಿದ್ದು ಮಾತ್ರ ಅದೇ ಸಹ್ಯಾದ್ರಿ ಬೆಟ್ಟಗಳ ಮರಿಸಿಂಹ. ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಾಂಭಾಜಿ ಮಹಾರಾಜ. ಕುಟುಂಬದ ಅಂತಃಕಲಹಗಳ ನಡುವೆಯೇ ತನ್ನ ಶೌರ್ಯದಿಂದಲೇ ಮೇಲೆದ್ದು ಬಂದ ಸಾಂಭಾಜಿಯು ಶಿವಾಜಿ ತೀರಿಕೊಂಡನೆಂದು ಸಂತಸಪಡುವ ಮೊದಲೇ ಮೊಘಲರ ಮೇಲೆ ಸಿಡಿಲಿನಂತೆ ಎರಗಿಬಂದ. ಮುಘಲರ ಶಕ್ತಿಕೇಂದ್ರವಾಗಿದ್ದ ಬುರ್ಹಾನ್ ಪುರದ ಮೇಲೆ ಆಕ್ರಮಣ ಮಾಡಿದ ಸಾಂಭಾಜಿ ತಾನು ಯಾಕೆ ಶಿವಾಜಿಯ ಮಗ ಎಂಬುದನ್ನು ಸಾಬೀತುಪಡಿಸಿದ. ಶಿವಾಜಿಯ ಮರಣಾನಂತರ ಮರಾಠಾ ಸಾಮ್ರಾಜ್ಯದ ಮೇಲೆ ಕಣ್ಣು ಹಾಕಬೇಡಿರೆನ್ನುವ ಎಚ್ಚರಿಕೆಯ ಕರೆಗಂಟೆ ಮೊಘಲರಿಗೆ ಅದಾಗಿತ್ತು.
ಸುಮಾರು ಒಂಭತ್ತು ವರ್ಷಗಳ ಕಾಲ ಮೊಘಲರಿಗೂ ದಕ್ಷಿಣಭಾರತಕ್ಕೂ ತಡೆಗೋಡೆಯಂತೆ ನಿಂತು ಮೊಘಲರನ್ನು ಇನ್ನಿಲ್ಲದಂತೆ ಕಾಡಿದ್ದ ಸಾಂಭಾಜಿಯನ್ನು ಕೊನೆಗೂ ಮೋಸದಿಂದ ಸೆರೆಹಿಡಿದ ಔರಂಗಜೇಬ. ಸೆರೆಸಿಕ್ಕಿದ ರಾಜನನ್ನು ಅತ್ಯಂತ ಅಮಾನುಷವಾದ ಚಿತ್ರಹಿಂಸೆಗಳಿಗೆ ಗುರಿಪಡಿಸಿ ಭೀಕರವಾಗಿ ಕೊಂದುಹಾಕಿದ. ಕಥೆ ಇಷ್ಟೇ ಆಗಿದ್ದದ್ದರೆ ಮರಾಠಾ ಸಾಮ್ರಾಜ್ಯದ ಅಂತ್ಯ ಸಂಭಾಜಿಯೊಡನೆಯೇ ಮುಗಿದುಹೋಗಿಬಿಡುತ್ತಿತ್ತು. ಆದರೆ ಸಾಯುವ ಸಮಯದಲ್ಲಿ ಸಾಂಭಾಜಿ ನಡೆದುಕೊಂಡ ರೀತಿ, ತೋರಿದ ಅಸಾಮಾನ್ಯ ಧೈರ್ಯ, ಅತಿಮಾನುಷ ಎನಿಸುವ ಪ್ರತಿರೋಧ, ಸಾಯುವಾಗಲೂ ಅವನ ಹೃದಯದಲ್ಲಿ ಜ್ವಲಿಸುತ್ತಿದ್ದ ಉಜ್ವಲವಾದ ಸ್ವರಾಜ್ಯ ಭಕ್ತಿಯು ಮರಾಠರ ರಕ್ತದಲ್ಲಿ ಶಿವಾಜಿಯ ಕಾರಣಕ್ಕೆ ಅದಾಗಲೇ ಬೆರೆತುಹೋಗಿದ್ದ ಸ್ವರಾಜ್ಯ ಭಕ್ತಿಯನ್ನು ಸ್ವಾಭಿಮಾನವನ್ನು ಲಾವಾರಸದಂತೆ ಬಿಸಿ ಮಾಡಿತು. ಸಾಂಭಾಜಿಯ ಬಲಿದಾನವಾಗಿ ಐವತ್ತು ವರ್ಷಗಳು ಕಳೆಯುವ ಮೊದಲೇ ಮೊಘಲ್ ಸಾಮ್ರಾಜ್ಯವನ್ನು ಬಗ್ಗುಬಡಿದ ಮರಾಠಾ ಸೇನೆಯು ಅಖಂಡ ಭಾರತದ ನಕ್ಷೆಯಲ್ಲಿ ಭಗವಾಧ್ವಜವನ್ನು ಹಾರಿಸಿಬಿಟ್ಟಿತ್ತು.
ಇದಕ್ಕೆ ಕಾರಣ ಸಾಂಭಾಜಿ ಮಹಾರಾಜರ ಬಲಿದಾನ. ಇತಿಹಾಸದ ಪಠ್ಯಗಳಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಅಲ್ಪ ಸ್ವಲ್ಪವಾದರೂ ಕೇಳಿರುತ್ತೇವೆ. ಆದರೆ ಸಾಂಭಾಜಿಯ ಬಗ್ಗೆ ಬರೆದಿರುವುದು ಅತ್ಯಲ್ಪ. ಮರಾಠರಲ್ಲಿ ಕೆಲವರಿಗೆ ತಿಳಿದಿರಬಹುದು ಬಿಟ್ಟರೆ ದೇಶದಾದ್ಯಂತ ಈತ ಶಿವಾಜಿಯ ವಂಶವೃಕ್ಷದ ಒಂದು ಸಾಮಾನ್ಯ ಹೆಸರಾಗಿ ಅಪರಿಚಿತ ವ್ಯಕ್ತಿಯಾಗಿಯೇ ಉಳಿದುಬಿಟ್ಟಿದ್ದ. ಅಂತಹಾ ವ್ಯಕ್ತಿಯ ತ್ಯಾಗ, ಧೈರ್ಯ, ಬಲಿದಾನಗಳನ್ನು ಛಾವಾ ಮುನ್ನೆಲೆಗೆ ತಂದಿದೆ. ಧರ್ಮವೀರನ ಜೀವನಕ್ಕೆ ನ್ಯಾಯ ಒದಗಿಸಿದೆ ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ. ಸಂಭಾಜಿಯ ಶೌರ್ಯ, ಪರಾಕ್ರಮಗಳನ್ನಷ್ಟೇ ಅಲ್ಲದೇ ಆತನ ಅಂತ್ಯದ ಸಮಯದಲ್ಲಿ ನಡೆದ ಕ್ರೂರ ಘಟನೆಗಳನ್ನೂ ಕಟ್ಟಿಕೊಡುವ ಮೂಲಕ ಒಂದು ಸರಿಯಾದ ಇತಿಹಾಸವನ್ನು ಈ ಚಿತ್ರ ಜನರ ಮುಂದಿರಿಸಿದೆ.
ಸತ್ಯ ಹೇಳಬೇಕೆಂದರೆ ಈ ಸಿನಿಮಾದಲ್ಲಿ ತೋರಿಸಿರುವ ಔರಂಗಜೇಬ ಮತ್ತು ಮೊಘಲರ ನಿಜವಾದ ಕ್ರೌರ್ಯದ ಐದು ಪ್ರತಿಶತವೂ ಇಲ್ಲವೆನ್ನಬಹುದು. ಆದರೆ ನಮಗೆ ಇಷ್ಟನ್ನು ಅರಗಿಸಿಕೊಳ್ಳೋಕೆ ತುಂಬಾ ದಿನಗಳು ಬೇಕಾಗುತ್ತವೆ. ಹೀಗಾಗಿ ಸಧ್ಯಕ್ಕೆ ಇಷ್ಟು ಸಾಕಾಗಿತ್ತು ಅಂತಲೇ ಹೇಳಬೇಕು. ಸಾಂಭಾಜಿಯನ್ನು ಕಟ್ಟಿಹಾಕಿ, ಉಗುರುಗಳನ್ನು ಕಿತ್ತು, ನಾಲಿಗೆ ಕತ್ತರಿಸಿ, ಕಣ್ಣುಗಳನ್ನು ಕಿತ್ತು, ಚರ್ಮಸುಲಿದು ಉಪ್ಪು ಸವರಿ ವಿಕೃತ ಆನಂದವನ್ನು ಅನುಭವಿಸಿದರೂ ಔರಂಗಜೇಬನಿಗೆ ಅವನ ಸೋಲನ್ನು ನೋಡಲಾಗಲಿಲ್ಲ ಎನ್ನುತ್ತದೆ ಇತಿಹಾಸ. ಆ ಇತಿಹಾಸವನ್ನು ಹೀಗೆಯೇ ನಡೆದಿತ್ತೇನೋ ಎನ್ನಿಸುವಷ್ಟರ ಮಟ್ಟಿಗೆ ಸಿನಿಮಾವನ್ನು ಕಲಾಕೃತಿಯಂತೆ ಕೆತ್ತಲಾಗಿದೆ. ಸಾಂಭಾಜಿ ಪಾತ್ರ ಮಾಡಿರುವ ವಿಕ್ಕಿ ಕೌಶಲ್ ಆಗಲಿ ಔರಂಗಜೇಬನಾಗಿರುವ ಅಕ್ಷಯ್ ಖನ್ನಾ ಆಗಲಿ, ಸಾಂಭಾಜಿಯ ಗೆಳೆಯನಾದ ಛಾಂದೋಗಾಮಾತ್ಯನ ಪಾತ್ರದ ವಿನೀತ್ ಆಗಲೀ, ಮಹಾರಾಣಿಯಾಗಿರುವ ರಶ್ಮಿಕಾ ಆಗಲೀ ಎಲ್ಲರೂ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದವರೇ. ಪ್ರತಿ ಪಾತ್ರ, ಪ್ರತಿ ದೃಶ್ಯ, ಪ್ರತಿ ಸಂಭಾಷಣೆಯೂ ಅದರದರ ಜಾಗದಲ್ಲಿ ನೂರಕ್ಕೆ ನೂರು ಪ್ರತಿಶತ ಪರಿಪೂರ್ಣತೆಯನ್ನೇ ಹೊಂದಿ ಮೈವೆತ್ತಿವೆ. ಇನ್ನೊಂದಿಷ್ಟು ಕಥೆಯನ್ನು ಸೇರಿಸಬಹುದಿತ್ತು ಎನ್ನುವುದೊಂದನ್ನು ಬಿಟ್ಟರೆ ಇಡೀ ಸಿನಿಮಾ ಒಂದು ಕೊಹಿನೂರ್.
ನೀವಿನ್ನೂ ಸಿನಿಮಾ ನೋಡಿಲ್ಲದಿದ್ದರೆ ಒಮ್ಮೆ ಹೋಗಿ ನೋಡಿ ಬನ್ನಿ. ಮನದಲ್ಲಿ ದೇಶಭಕ್ತಿ, ಧರ್ಮಪ್ರಜ್ಞೆ ತೃಣವಾದರೂ ಉಳಿದುಕೊಂಡಿದ್ದರೆ ಖಂಡಿತಾ ಕಣ್ಣಲ್ಲಿ ನೀರು ಬರುತ್ತದೆ. ಧರ್ಮಕ್ಕಾಗಿ ಪ್ರಾಣ ಕೊಟ್ಟ, ಸಹಿಸಲು ಅಸಹನೀಯವಾದ ಪೀಡನೆಯನ್ನು ತಾಳಿಕೊಂಡ ಆ ವೀರನ ನೆನಪಾಗಿ ಹೆಮ್ಮೆಯಿಂದ ಎದೆಯುಬ್ಬುತ್ತದೆ. ಸೂಪರ್ ಹೀರೋಗಳಿಲ್ಲದ ಪರದೇಶದಲ್ಲಿ ಕಾಲ್ಪನಿಕ ಪಾತ್ರಗಳು ತೆರೆಯ ಮೇಲೆ ಸೂಪರ್ ಹೀರೋಗಳಾಗಿ ಬಂದರೆ, ನಮ್ಮ ದೇಶದಲ್ಲಿ ತೆರೆಯ ಮೇಲೆ ತರಲೇಬೇಕಾದ ಇಂತಹಾ ನಿಜವಾದ ಸೂಪರ್ ಹೀರೋಗಳು ಬದುಕಿ ಬಾಳಿದ್ದರು. ಇನ್ನೊಬ್ಬರಿಗಾಗಿ ಅಸುವನ್ನು ನೀಗಿದ್ದರು. ಅಂತಹವರೆಲ್ಲರ ನೆನಪಿನಲ್ಲಿ ಸಿನಿಮಾ ಜಗತ್ತು ದೇಶಕ್ಕೆ ಕೊಟ್ಟು ಅನುಪಮ ಕೊಡುಗೆಯೇ ಈ ಛಾವಾ!!!!