ಮಂಗಳೂರು : ಕಾಮಗಾರಿಗಳ ಉದ್ಘಾಟನೆಯ ವಿಚಾರದಲ್ಲಿ ಮಂಗಳೂರು ನಗರದಲ್ಲಿ ಹಗ್ಗ ಜಗ್ಗಾಟ ಆರಂಭವಾಗಿದ್ದು, ಇದೀಗ ಉದ್ಘಾಟನೆಗೊಂಡು ಸ್ಥಳಾಂತರಗೊಂಡಿದ್ದ ಸೇವಾ ಕೇಂದ್ರಗಳಿಗೆ ಬೀಗ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ , ಪಶು ಚಿಕಿತ್ಸಾ ಕೇಂದ್ರ, ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳ ವಸತಿ ಗೃಹ ಕಳೆದ ಭಾನುವಾರು ಉದ್ಘಾಟನೆಗೊಂಡಿತ್ತು. ಸಂಸದ ಬ್ರಿಜೇಶ್ ಚೌಟ , ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಮನೋಜ್ ಕುಮಾರ್ ಅವರು ಈ ಕಾಮಗಾರಿಗಳ ಉದ್ಘಾಟನೆ ಮಾಡಿದ್ದರು.ಆದರೆ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಆವ್ಹಾನಿಸಿಲ್ಲವೆಂದು ಉದ್ಘಾಟನೆಗೊಂಡ ಆರೋಗ್ಯಕೇಂದ್ರಕ್ಕೆ ಬೀಗ ಜಡಿದು ಮರು ಉದ್ಘಾಟನೆಗೆ ನಾಳೆ ತಯಾರಿರುವುದು ತಿಳಿದುಬಂದಿದೆ.
ಮಂಗಳಾದೇವಿ ವಾರ್ಡ್ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಈ ಕಾಮಗಾರಿಗಳನ್ನು ಮಾಡಲಾಗಿದ್ದು ಸ್ಥಳೀಯ ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ ಅವರು ಇದರ ಮುತುವರ್ಜಿ ವಹಿಸಿದ್ದರು. ಭಾನುವಾರ ಉದ್ಘಾಟನೆಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಚಿಕಿತ್ಸಾ ಕೇಂದ್ರಗಳು ಅಂದೇ ಹಳೆ ಕಟ್ಟದಿಂದ ಸ್ಥಳಾಂತರವಾಗಿ ಕಾರ್ಯಾರಂಭ ಮಾಡಿತ್ತು. ಜನರೂ ಕೂಡಾ ಈ ಕೇಂದ್ರಗಳಿಗೆ ಬಂದು ಸೇವೆಯನ್ನು ಪಡೆಯುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದು , ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಜಂಟಾಟ ತಪ್ಪಿದ ಖುಷಿಯಲ್ಲಿದ್ರು. ಆದ್ರೆ ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದ್ ಆಗಿದ್ದು, ಚಿಕಿತ್ಸೆಗಾಗಿ ಬಂದ ರೋಗಿಗಳು ಬೀಗ ನೋಡಿ ವಾಪಾಸಾಗಿದ್ದಾರೆ.ಕೇವಲ ಕೆಲವೇ ದಿನಗಳಲ್ಲಿ ಬೀಗ ಜಡಿದಿಡಿರುವುದು ಕಂಡು ಬೆಳ್ಳಂಬೆಳ್ಳಗ್ಗೆ ಅರೋಗ್ಯ ಕೇಂದ್ರಕ್ಕೆ ಬಂದ ಜನರಿಗೆ ದಿಗಿಲುಬಡಿದಂತಾಗಿದೆ.
ಈ ಕಾಮಗಾರಿಗಳ ಉದ್ಘಾಟನೆಯ ವಿಚಾರವಾಗಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಸಮಾದಾನ ವ್ಯಕ್ತಪಡಿಸಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಾರದೆ ಶಿಷ್ಠಾಚಾರ ಉಲ್ಲಂಘಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು ಮತ್ತೆ ಈ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ಶುಕ್ರವಾರ ಈ ಕೇಂದ್ರಗಳನ್ನು ಬಂದ್ ಮಾಡಿಸಲಾಗಿದೆ. ಅಧಿಕಾರಿಗಳು ಈ ಕೇಂದ್ರಗಳನ್ನು ಬಂದ್ ಮಾಡಿರುವ ವಿಚಾರಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ರವರು ಈ ಬಗ್ಗೆ ಮಾತನಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮಾಹಿತಿ ಇತ್ತಾದ್ರೂ ಬರಲಾಗುವುದಿಲ್ಲ ಎಂದು ಹೇಳಿದ್ದಾಗಿ ಶಾಸಕರು ಹೇಳಿದ್ದಾರೆ. ಹಾಗಂತ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ಮತ್ತೊಂದು ಬಾರಿ ಉದ್ಘಾಟನೆ ಮಾಡುವ ಔಚಿತ್ಯವನ್ನು ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನೆ ಮಾಡಿದ್ದಾರೆ.ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಒಂದು ಗುದ್ದಲಿ ಪೂಜೆ ನೆರೆವೇರಿಸದಿರುವುದು ಬೇಸರದ ಸಂಗತಿ ಇದರಿಂದ ಬಿಜೆಪಿ ಅವಧಿಯ ಕಾಮಗಾರಿಯ ಉದ್ಘಾಟನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಆಕ್ರೋಶಹೊರಹಾಕಿದ್ದಾರೆ