ಮಂಗಳೂರು: “ಭುವನಂ ಗಗನಂ ಸಿನಿಮಾದ ಒಬ್ಬ ನಾಯಕ ಪೃಥ್ವಿ ಅಂಬರ್ ಮಂಗಳೂರಿನವರು ಆಗಿರುವ ಕಾರಣ ಮಂಗಳೂರು ಭಾಷೆಯನ್ನು ಸಿನಿಮಾದಲ್ಲಿ ಬಳಸಲಾಗಿದೆ. ನವಿರಾದ ಪ್ರೇಮಕತೆ ಸಿನಿಮಾದ ಜೀವಾಳವಾಗಿದ್ದು ಫೆ.14ರ ಪ್ರೇಮಿಗಳ ದಿನದಂದು ಸಿನಿಮಾ ಬಿಡುಗಡೆಯಾಗಲಿದೆ“ ಎಂದು ಚಿತ್ರ ನಿರ್ದೇಶಕ ಗಿರೀಶ್ ಮೂಲಿಮನೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ನಟ ಪೃಥ್ವಿ ಅಂಬರ್ ಮಾತಾಡಿ, ”ನನಗೆ ತುಳು ಭಾಷೆ, ಮಂಗಳೂರು ಅಂದ್ರೆ ಬಹಳ ಇಷ್ಟ. ಇಲ್ಲಿನ ಪ್ರೇಕ್ಷಕರು ನನ್ನ ಈ ಹಿಂದಿನ ತುಳು, ಕನ್ನಡ ಸಿನಿಮಾಗಳನ್ನು ಮೆಚ್ಚಿಕೊಂಡಿದ್ದಾರೆ. ದಿಯಾ ಸಿನಿಮಾ ಬಳಿಕ ಪ್ರೇಕ್ಷಕರು ಭಾವುಕರಾಗುವ ಸನ್ನಿವೇಶ ಈ ಸಿನಿಮಾದಲ್ಲಿದೆ. 50 ಶೇ. ಮಂಗಳೂರು ಕನ್ನಡ ಸಿನಿಮಾದಲ್ಲಿದೆ. ಇಲ್ಲಿನ ನೇಟಿವಿಟಿ ಸಿನಿಮಾದಲ್ಲಿ ಇರುವ ಕಾರಣ ನಿಮಗೆಲ್ಲ ಖಂಡಿತ ಇಷ್ಟವಾಗುತ್ತದೆ. ಎಲ್ಲರೂ ಸಿನಿಮಾ ನೋಡಿ“ ಎಂದರು.
ನಟ ಪ್ರಮೋದ್ ಮಾತಾಡಿ, “ಗೀತಾ ಬ್ಯಾಂಗಲ್ ಸ್ಟೋರ್, ಪ್ರೀಮಿಯರ್ ಪದ್ಮಿನಿಯಂತಹ ಸಿನಿಮಾ ಮಾಡಿದ್ದೇನೆ. ನೀವು ತುಂಬಾ ಬೆಂಬಲ ನೀಡಿದ್ದೀರಿ. ಈ ಬಾರಿ ಒಂದೊಳ್ಳೆ ಪ್ರೇಮಕತೆಯೊಂದಿಗೆ ಬಂದಿದ್ದೇನೆ. ಹೊಸಬರ ಹೊಸ ಪ್ರಯತ್ನವನ್ನು ಗೆಲ್ಲಿಸಿ. ಇದರಿಂದ ಹೊಸ ಪ್ರತಿಭೆಗಳಿಗೆ ಇನ್ನಷ್ಟು ಅವಕಾಶ ಸಿಕ್ಕಂತಾಗುತ್ತದೆ” ಎಂದರು.
ನಟಿ ರೇಷಲ್ ಡೇವಿಡ್ ಮಾತಾಡಿ, “ಸಿನಿಮಾದಲ್ಲಿ ಮಂಗಳೂರಿನ ಭಾಷೆ ಇಲ್ಲಿನ ಸಂಸ್ಕೃತಿಯನ್ನು ತೋರಿಸಲಾಗಿದೆ. ಮಂಗಳೂರಿನ ಚಿತ್ರಪ್ರೇಮಿಗಳು ಸಿನಿಮಾ ನೋಡಿ ನಮ್ಮನ್ನು ಆಶೀರ್ವದಿಸಿ” ಎಂದರು.
ನಟಿ ಪೊನ್ನು ಅಶ್ವಥಿ ಮಾತಾಡಿ, “ಈ ಸಿನಿಮಾದಲ್ಲಿ ಎಲ್ಲ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ವಿಭಿನ್ನ ಪ್ರೇಮಕತೆಯಿದೆ, ಎಲ್ಲರೂ ಸಿನಿಮಾ ನೋಡಿ” ಎಂದರು.
ನಿರ್ಮಾಪಕ ಎಂ.ಮುನೇ ಗೌಡ ಮಾತಾಡಿ, “ಸಿನಿಮಾಕ್ಕೆ ದುಬೈಯಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಯಾರಾದರೂ ಸಿನಿಮಾ ನೋಡಿದವರು ಸಿನಿಮಾ ಚೆನ್ನಾಗಿಲ್ಲ ಅಂತಂದ್ರೆ ಸಿನಿಮಾದ ಹಣ ವಾಪಾಸ್ ಕೊಡುತ್ತೇವೆ” ಎಂದರು. ಪತ್ರಿಕಾಗೋಷ್ಟಿಯಲ್ಲಿ ಮಹೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.