ಮೈಸೂರು : ವ್ಯಕ್ತಿವೋರ್ವ ಮುಸ್ಲಿಂ ಸಮುದಾಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನಲೆಯಲ್ಲಿ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಪ್ರತಿಭಟನೆ ನಡೆದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಉದಯಗಿರಿಯ ತ್ರಿವೇಣಿ ವೃತ್ತದ ಬಳಿಯ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಅರವಿಂದ ಕೇಜ್ರವಾಲ್ ಅವರ ಭಾವಚಿತ್ರವನ್ನು ಹಾಕಿ ಅದರ ಮೇಲೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತ ಸಾಲುಗಳನ್ನು ಉಲ್ಲೇಖ ಮಾಡಲಾಗಿದೆ. ಇದರ ಜೊತೆಗೆ ಮಹಾತ್ಮಾಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರ ಕುರಿತ ಅವಹೇಳನಕಾರಿ ವೀಡಿಯೋ ಪೋಸ್ಟ್ ಮಾಡಿದ್ದ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಸುಮುಟೋ ಪ್ರಕರಣ ದಾಖಲಿಸಿ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಕೆಲವರು ಸೋಮವಾರ ರಾತ್ರಿ ಉದಯಗಿರಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿ ಗುಂಪನ್ನು ಚದುರಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಆಗಮಿಸಿದ್ದಾರೆ. ಈ ವೇಳೆ ದೂರವಾಣಿ ಮೂಲಕ ಘಟನೆ ವಿವರ ಪಡೆಯಲು ಡಿಸಿಪಿ ಅವರನ್ನು ಸಂಪರ್ಕಿಸಲಾಯಿತಾದರೂ ಅವರು ಸ್ವಲ್ಪ ಸಮಯದ ನಂತರ ಮಾತನಾಡುವುದಾಗಿ ತಿಳಿಸಿದರು.