ಶಿವಮೊಗ್ಗ : ಸ್ಕೈಡೈವಿಂಗ್ ವೇಳೆ ಏರ್ ಪೋರ್ಸ್ ನ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 19 ಸಾವಿರ ಅಡಿಗಳ ಮೇಲಿಂದ ಬಿದ್ದು ಗಾಯಗೊಂಡು ಬಳಿಕ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ವಿಮಾನದಿಂದ ಹಾರಿದ ಬಳಿಕ ಪ್ಯಾರಾಚೂಟ್ ನಿಷ್ಕ್ರಿಯವಾಗಿ ಈ ಅವಘಢ ಸಂಭವಿಸಿದೆ. ಈ ಮೂಲಕ ಮಲೆನಾಡು ಜಿಲ್ಲೆ ಶಿವಮೊಗ್ಗ ಒಬ್ಬ ಯೋಧನನ್ನು ಕಳೆದುಕೊಂಡಂತಾಗಿದ್ದು, ಮೃತ ಅಧಿಕಾರಿ ಗ್ರಾಮ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ.
ಮಿಲಿಟರಿ ಏರ್ ಫೋರ್ಸ್ ಅಧಿಕಾರಿ 36 ವರ್ಷದ ಮಂಜುನಾಥ್ ಎಂದು ತಿಳಿದುಬಂದಿದೆ. ಪ್ಯಾರಾ ಟ್ರೈನಿಂಗ್ ಸ್ಕೂಲ್ ನಲ್ಲಿ ವಾರೆಂಟ್ ಆಫಿಸರ್ ಹಾಗೂ ಪ್ಯಾರಾ ಜಂಪ್ ಇನ್ಸ್ಟ್ರಕ್ಟರ್ ಆಗಿ ಕಾರ್ಯ ನಿರ್ವಹಿಸುತಿದ್ದ ಮಂಜುನಾಥ್, ನಿನ್ನೆ ಶುಕ್ರವಾರ ಬೆಳಿಗ್ಗೆ ಸ್ಕೈ ಡೈವಿಂಗ್ ಮಾಡುವ ವೇಳೆ ಪ್ಯಾರಾಚೂಟ್ ನಿಷ್ಕ್ರಿಯವಾದ ಕಾರಣ ನಿಯಂತ್ರಣ ಕಳೆದುಕೊಂಡು ಸುಮಾರು 13 ಸಾವಿರ ಅಡಿ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಆಗ್ರಾದಲ್ಲಿರುವ ಪ್ಯಾರಾಟ್ರೂಪರ್ ತರಬೇತಿ ಕೇಂದ್ರದಲ್ಲಿ ಸ್ಕೈಡೈವಿಂಗ್ ವೇಳೆ ಹಾರಿದ 11 ಮಂದಿ ವಾಪಾಸ್ ಬಂದಿದ್ದರೂ, ಮಂಜುನಾಥ್ ಜಿ ಎಸ್ ಮಾತ್ರ ಸುರಕ್ಷಿತವಾಗಿ ಕೆಳಕ್ಕೆ ಇಳಿದಿರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದಾಗ, ಅವರು ತೀವ್ರ ಗಂಭೀರವಾದ ಸ್ಥಿತಿಯಲ್ಲಿ ಗೋದಿಯ ಹೊಲದಲ್ಲಿ ಪತ್ತೆಯಾಗಿದ್ದಾರೆ. ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರದೊಯ್ಯಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮಂಜುನಾಥ್ ಮೃತದೇಹ ಡ್ರಾಫಿಂಗ್ ಝೋನ್ ಮಲ್ಪುರ ಬಳಿ ಪತ್ತೆಯಾಗಿದೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನವರಾಗಿರುವ ಮಂಜುನಾಥ್, ಏರ್ ಫೋರ್ಸ್ ಅಧಿಕಾರಿಯಾಗಿದ್ದರು. ಹೊಸನಗರ ತಾಲೂಕಿನ ಪಟಗುಪ್ಪ ಬಳಿಯ ಸಂಕೂರಿನ ಗೊರಗದ್ದೆ ಯಲ್ಲಿ ತಂದೆ ತಾಯಿ ಹಾಗೂ ತಮ್ಮ , ತಂಗಿ ಇದ್ದು 2019 ರಲ್ಲಿ ಅಸ್ಸಾಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಈಗ ಮಂಜುನಾಥ್ ಜಿ ಎಸ್ ರವರ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿದೆ. ಇನ್ನು ಮೃತ ದೇಹ ಆಗ್ರಾದಲ್ಲಿದ್ದು, ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಹುಟ್ಟೂರಾದ ಹೊಸನಗರ ತಾಲೂಕಿನ ಸಂಕೂರು ಗ್ರಾಮಕ್ಕೆ ಬರಲಿದೆ ಎನ್ನಲಾಗುತ್ತಿದೆ. ಅತ್ತ ಆಗ್ರಾದಲ್ಲಿ ಪ್ಯಾರಾಚೂಟ್ ಕೈಕೊಟ್ಟ ಕಾರಣದಿಂದಾಗಿ ಮಲೆನಾಡಿನ ಯೋಧ ಬಾರದ ಲೋಕಕ್ಕೆ ಪಯಣಿಸಿದ್ದರೆ ಇತ್ತ ಮಲೆನಾಡಿನ ಸಂಕೂರು ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. ಒಟ್ಟಿನಲ್ಲಿ ಮಲೆನಾಡಿನ ಯೋಧನೊಬ್ಬ ಭಾರತ ಮಾತೆಯ ರಕ್ಷಣೆಗಾಗಿ ಸೈನ್ಯ ಸೇರಿದ್ದು, ಕರ್ತವ್ಯದಲ್ಲಿದ್ದಾಗಲೇ, ಅಮರನಾಗಿದ್ದಾರೆ. ಗ್ರಾಮದಲ್ಲಿ ಮನೆಯವರು ಮನೆಗೆಲಸದಲ್ಲಿ ನಿರತರಾಗಿರುವ ಇವರ ತಂದೆ, ತಾಯಿಗೆ ಊರಿನವರಿನ್ನು ವಿಷಯ ತಿಳಿಸದೇ ಇದ್ದರೂ, ಇಡೀ ಗ್ರಾಮ ಮಾತ್ರ ಶೋಕ ಸಾಗರದಲ್ಲಿ ಮುಳುಗಿದೆ.