ಬೆಂಗಳೂರು : ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿರುವ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳುವಂತೆ ಬೆAಗಳೂರಿನ ೫ನೇ ಎಸಿಎಂಎಆ ನ್ಯಾಯಾಲಯ ಸಲಹೆ ನೀಡಿದೆ.
ನ್ಯಾಯಾಧೀಶ ವಿಜಯಕುಮಾರ್ ಜಾಟ್ಲಾ ಅವರು ಬುಧವಾರ ನಡೆಸಿದ ವಿಚಾರಣೆ ವೇಳೆ ಇಬ್ಬರೂ ಅಧಿಕಾರಿಗಳು ಖುದ್ದು ಹಾಜರಾಗಿದ್ದರು. ಈ ವೇಳೆ ನ್ಯಾ.ವಿಜಯ್‌ಕುಮಾರ್ ಅವರು ಉಭಯ ಅಧಿಕಾರಿಗಳನ್ನು ಉದ್ದೇಶಿಸಿ, “ನೀವಿಬ್ಬರೂ ನಿಮ್ಮ ನಿಮ್ಮ ಸೇವೆಯಲ್ಲಿ ಉತ್ತಮ ಹೆಸರು ಮಾಡಿದ್ದೀರಿ. ನಿಮ್ಮ ಸಮಯವನ್ನು ಸಮಾಜಕ್ಕಾಗಿ ಮೀಸಲಿಡಿ. ನೀವಿಬ್ಬರೂ ಒನ್ ಮಿನಟ್ ಅಪಾಲಜಿ ಪುಸ್ತಕ ಓದಿದರೆ ನಿಮ್ಮ ಮನಸ್ಸು ಪರಿವರ್ತನೆ ಆಗಬಹುದು. ಸುಮ್ಮನೆ ನ್ಯಾಯಾಲಯದಲ್ಲಿ ಕಾಲಹರಣ ಮಾಡುವ ಬದಲು ನೀವು ಇನ್ನಷ್ಟು ಉತ್ತಮ ಕೆಲಸ ಮಾಡಿ, ಹೆಸರು ಮಾಡಲು ಅವಕಾಶವಿದೆ,” ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ರೋಹಿಣಿ ಸಿಂಧೂರಿ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲಾಯಿತು. ಬಳಿಕ ವಿಚಾರಣೆಯನ್ನು ಫೆ.೧೨ಕ್ಕೆ ಮುಂದೂಡಲಾಯಿತು. ಕಳೆದ 2023 ರ ಫೆಬ್ರವರಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ವೈಯಕ್ತಿಕ ಆರೋಪಗಳನ್ನು ಮಾಡಿದ್ದರು. ಇದರ ವಿರುದ್ಧ ರೋಹಿಣಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.


