ಬೆಂಗಳೂರು : ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಚಾಲನೆ ಮಾಡುತ್ತಿದ್ದ ಕಾರಿಗೆ ಸರಕು ಸಾಗಣೆ ಆಟೋ ಡಿಕ್ಕಿ ಹೊಡೆದ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ನಗರದ ಕನ್ನಿಂಗ್‌ಗ್ಯಾಮ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪಘಾತದಿಂದ ಯಾರಿಗೆ ತೊಂದರೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ರಾಹುಲ್ ದ್ರಾವಿಡ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಆಟೋ ಡಿಕ್ಕಿಯಿಂದಾಗಿ ಕಾರಿನಿಂದ ರಾಹುಲ್ ದ್ರಾವಿಡ್ ಕೆಳಗೆ ಇಳಿದು ಪರಿಶೀಲನೆ ನಡೆಸಿದ್ದರು. ಆಟೋ ಚಾಲಕ ಮತ್ತು ರಾಹುಲ್ ಮಧ್ಯೆ ಮಾತಿನ ಚಕಮಕಿ ನಡೆದಿದೆ.ಘಟನೆಯ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.