ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಫೆ.೫ರಂದು ನಡೆಯಲಿರುವ ಬಹುನಿರೀಕ್ಷಿತ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು, 70ಸ್ಥಾನಗಳಿಗಾಗಿ 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2020ರ ಚುನಾವಣೆಯಲ್ಲಿ 672 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಫೆ.8ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿವೆ. ಮುಖ್ಯ ಚುನಾವಣಾಧಿಕಾರಿಗಳು ನೀಡಿರುವ ಮಾಹಿತಿಗಳ ಪ್ರಕಾರ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು ಸ್ಪರ್ಧಿಸಿರುವ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 23 ಅಭ್ಯರ್ಥಿಗಳು ಕಣದಲ್ಲಿದ್ದು, ಕೇಜ್ರಿವಾಲ್ ಬಿಜೆಪಿಯ ಪರ್ವೇಶ ವರ್ಮಾ ಮತ್ತು ಕಾಂಗ್ರೆಸ್‌ನ ಸಂದೀಪ ದೀಕ್ಷಿತ್ ಅವರಿಂದ ತೀವ್ರ ಪೈಪೋಟಿಯನ್ನು ಎದುರಿಸುತ್ತಿದ್ದಾರೆ. ನಂತರದ ಸ್ಥಾನದಲ್ಲಿರುವ ಜನಕಪುರಿಯಲ್ಲಿ 16 ಅಭ್ಯರ್ಥಿಗಳು ಸ್ಪರ್ಧಿಸಿದ್ದು,ರೋಹ್ತಾಸ್ ನಗರ, ಕಾರವಲ್ ನಗರ ಮತ್ತು ಲಕ್ಷ್ಮಿ ನಗರಗಳಲ್ಲಿ ತಲಾ 15 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಅತ್ತ ಪಟೇಲ್ ನಗರ ಮತ್ತು ಕಸ್ತೂರಬಾ ನಗರ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳಿದ್ದಾರೆ. ಇವೆರಡೂ ಕ್ಷೇತ್ರಗಳಲ್ಲಿ ತಲಾ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗಮನಾರ್ಹವಾಗಿ,ಪರಿಶಿಷ್ಟ ಜಾತಿಗಳಿಗಾಗಿ ಮೀಸಲಾಗಿರುವ ಪಟೇಲ್ ನಗರ ಕ್ಷೇತ್ರಲ್ಲಿ ೨೦೨೦ರಲ್ಲೂ ಕನಿಷ್ಠ ಸಂಖ್ಯೆ(4)ಯಲ್ಲಿ ಅಭ್ಯರ್ಥಿಗಳಿದ್ದರು.
70 ವಿಧಾನಸಭಾ ಕ್ಷೇತ್ರಗಳ ಪೈಕಿ ತಿಲಕನಗರ, ಚಾಂದ್ನಿಚೌಕ್ ಮತ್ತು ಗ್ರೇಟರ್ ಕೈಲಾಷ ಸೇರಿದಂತೆ 38 ರಲ್ಲಿ ಹತ್ತಕ್ಕೂ ಕಡಿಮೆ ಅಭ್ಯರ್ಥಿಗಳಿದ್ದಾರೆ. ಆಪ್ ಮತ್ತು ಕಾಂಗ್ರೆಸ್ ಎಲ್ಲ 70 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, 68 ಸ್ಥಾನಗಳಿಗೆ ಸ್ಪರ್ಧಿಸಿರುವ ಬಿಜೆಪಿ ಎರಡು ಸ್ಥಾನಗಳನ್ನು ಮಿತ್ರಪಕ್ಷಗಳಾದ ಜೆಡಿಯು ಮತ್ತು ಲೋಕತಾಂತ್ರಿಕ ಜನಶಕ್ತಿ ಪಾರ್ಟಿಗೆ ಬಿಟ್ಟುಕೊಟ್ಟಿದೆ. ಬಿಎಸ್‌ಪಿ 69 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ನ.10 ರಿಂದ ನಾಮಪತ್ರಗಳ ಸಲ್ಲಿಕೆ ಆರಂಭಗೊAಡಿದ್ದು,ಒಟ್ಟು 981 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಜ.18 ರಂದು ನಾಮಪತ್ರಗಳ ಪರಿಶೀಲನೆ ನಡೆದಿದ್ದು,ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಜ.20 ಕೊನೆಯ ದಿನವಾಗಿತ್ತು. ಅಂತಿಮವಾಗಿ 699 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.