ಚಿಕ್ಕಮಗಳೂರು : ಚಿಕ್ಕಮಗಳೂರಿನ ತರೀಕೆರೆ ಪಟ್ಟಣದ ತರಳಬಾಳು ಮದುವೆ ಮಂಟಪ ಹೃದಯ ವಿದ್ರಾವಕ ಘಟನೆಗೆ ಸಾಕ್ಷಿ ಆಯಿತು. ಮಾಂಗಲ್ಯಂ ತಂತು ನಾನೇನಾ ಅಂತ ತಾಳಿ ಕಟ್ಟಿಸಿಕೊಂಡ ಮಗಳ ಸಂತೋಷ ಹೆಚ್ಚು ಕಾಲ ಉಳಿಯಲೇ ಇಲ್ಲ. ಮದುವೆ ಮುಹೂರ್ತ ಮುಗಿದು ಹೊರ ಬರುತ್ತಿದ್ದಂತೆ ಇಡೀ ಮದುವೆ ಮಂಟಪದಲ್ಲಿ ಸೂತಕದ ಛಾಯೆ ಆವರಿಸಿ ಬಿಟ್ಟಿತು.
ಕಾಫಿ ನಾಡಿನಲ್ಲೊಂದು ಕರುಳು ಹಿಂಡುವ ಕಥೆ ನಡೆದಿದೆ. ಈ ಕಥೆ ಕೇಳಿದವರ ಹೃದಯ ಮಮ್ಮಲ ಮರುಗುತ್ತದೆ. ಕಂಬನಿ ಮಿಡಿಯುವಂತೆ ಮಾಡುತ್ತದೆ. ಆಪ್ತಮಿತ್ರನಿಗೆ ಮಗಳ ಮದುವೆಯ ಕರೆಯೋಲೆ ಕೊಡಲು ಹೋದ ತಂದೆ ಮಾರ್ಗಮಧ್ಯೆ ಅಪಘಾತಕ್ಕೀಡಾಗಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿ ಬಳಿಕ ಸಾವನ್ನಪ್ಪಿದ ವಿಷಯವೇ ತಿಳಿಯದ ಮುದ್ದು ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ಭಾನುವಾರ ಹಾಗೂ ಸೋಮವಾರ ತರೀಕೆರೆ ಪಟ್ಟಣದ ನಾಗಪ್ಪ ಕಾಲೋನಿ ನಿವಾಸಿ ಚಂದ್ರು ಎಂಬುವರ ಮಗಳ ಮದುವೆ ನಿಶ್ಚಯವಾಗಿತ್ತು. ಕೊನೆ ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದರು. ಆದರೆ, ಮಗಳ ಆರತಕ್ಷತೆಯ ದಿನ ಆತ್ಮೀಯ ಸ್ನೇಹಿತರೊಬ್ಬರಿಗೆ ಲಗ್ನಪತ್ರಿಕೆ ಕೊಟ್ಟಿಲ್ಲವೆಂದು ತಾಲೂಕಿನ ಹುಲಿತಿಮ್ಮಾಪುರಕ್ಕೆ ಹೋಗಿ ಕಾರ್ಡ್ ಕೊಟ್ಟು ಆ ಮನೆಯವರನ್ನು ಮದುವೆಗೆ ಆಹ್ವಾನಿಸಿ ವಾಪಸ್ ಮನೆಗೆ ಬರುವ ವೇಳೆ ಬೈಕ್ ಅಪಘಾತವಾಗಿತ್ತು. ತೀವ್ರ ಗಂಭೀರ ಗಾಯವಾಗಿದ್ದ ಚಂದ್ರು ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದ್ರು ಭಾನುವಾರ ಮಧ್ಯಾಹ್ನವೇ ಮರಣ ಹೊಂದಿದ್ದರು.
ಈ ವಿಷಯ ಮನೆಯವರಿಗೆ ತಿಳಿದರೆ ಮದುವೆ ನಿಂತುಹೋಗುತ್ತದೆ ಎಂದು ತಿಳಿದು ಕುಟುಂಬಸ್ಥರು ವಿಷಯವನ್ನು ಮೃತರ ಪತ್ನಿ ಹಾಗೂ ಮಗಳು ದೀಕ್ಷಾಗೆ ತಿಳಿಸಲೇ ಇಲ್ಲ. ಅಪಘಾತವಾಗಿದೆ ಆಸ್ಪತ್ರೆಯಲ್ಲಿದ್ದಾರೆಂದು ಹೇಳಿ ಭಾನುವಾರ ಸಂಜೆ ಆರತಕ್ಷತೆ ಮುಗಿಸಿ, ಇಂದು ಬೆಳಿಗ್ಗೆ ಮುಹೂರ್ತವನ್ನೂ ಮುಗಿಸಿದ್ದಾರೆ. ಮುಹೂರ್ತ ಮುಗಿದ ಬಳಿಕ ವಿಷಯವನ್ನು ಮನೆಯವರಿಗೆ ತಿಳಿಸಲಾಗಿದೆ. ವಿಷಯ ಕೇಳಿ ಮೃತನ ಪತ್ನಿ ಹಾಗೂ ಮಗಳಿಗೆ ಬರಸಿಡಿಲು ಬಡಿದಂತಾಗಿ ಕುಟುAಬಸ್ಥರ ನೋವಿನ ಆಕ್ರಂದನ ಮುಗಿಲುಮುಟ್ಟಿದೆ. ನವದಂಪತಿಯಾಗಿ ಮಗಳು ಮನೆಗೆ ಬರುವ ವೇಳೆಗೆ ತಂದೆಯ ಮೃತದೇಹ ಕೂಡ ಬಂದಿತ್ತು. ಮನೆಯವರು ಮಗಳ ಮದುವೆಯಾಯಿತು ಎಂದು ಸಂತೋಷಪಡಬೇಕೋ ಅಥವಾ ಮನೆಯ ಯಜಮಾನ ಸಾವನ್ನಪ್ಪಿದ್ದಾನೆಂದು ಕಣ್ಣೀರಿಡಬೇಕೋ ತಿಳಿಯದಂತೆ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಮೃತರಿಗೆ ಮೂರು ಜನ ಹೆಣ್ಣು ಮಕ್ಕಳು. ಮೊದಲ ಮಗಳ ಮದುವೆಯಲ್ಲಿ ಕೊರೊನಾ ಅಡ್ಡಿ ಬಂತು. ಕುಟುಂಬಸ್ಥರು, ಸಂಬAಧಿಕರಷ್ಟೆ ಪಾಲ್ಗೊAಡು ಮದುವೆ ಮಾಡಿದ್ದರು. ಹಾಗಾಗಿ, ಕೊನೆ ಮಗಳ ಮದುವೆ ಅದ್ಧೂರಿಯಾಗಿ ಮಾಡಬೇಕೆಂದು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಮದುವೆಗೆ ಅಪ್ಪನೇ ಇರಲಿಲ್ಲ ಎಂಬುವುದೇ ವಿಧಿ ಬರಹ.