ಕೊಪ್ಪಳ : ಕೊಪ್ಪಳ ನಗರದ ಶ್ರೀ ಗವಿಮಠದಲ್ಲಿ ಭಾನುವಾರ ಸಾಯಂಕಾಲ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಶ್ರೀಮಠದ ಕೆರೆಯ ಆವರಣದಲ್ಲಿ ಜರುಗಿತು. ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಇಂದು ಸಂಜೆ ಗವಿಮಠದ ಕೆರೆಯಲ್ಲಿ ಶ್ರೀ ಗವಿಸಿದ್ದೇಶ್ವರ ಮೂರ್ತಿಯ ತೆಪ್ಪೋತ್ಸವ ಸಂಭ್ರಮ, ಸಡಗರದಿಂದ ನೆರವೇರಿತು. ವಿದ್ಯುತ್ ದೀಪಗಳಲ್ಲಿ ಅಲಂಕಾರಗೊಂಡ ಶ್ರೀ ಗವಿಸಿದ್ದೇಶ್ವರ ಮೂರ್ತಿಯ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ತೆಪ್ಪೋತ್ಸವದ ದಲ್ಲಿ ನಡೆದ ಗಂಗಾರತಿ ವಿಷೇಶ ಕಣ್ಮನ ಸೆಳೆಯಿತು. ತೆಪ್ಪೋತ್ಸವ ಹಾಗೂ ಗಂಗಾರತಿಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡು ಪುನೀತರಾದರು.
ಜಾತ್ರಾ ಮಹೋತ್ಸವದಲ್ಲಿ ಅತ್ಯಂತ ಕಣ್ಮನ ಸೆಳೆಯುವ ಉತ್ಸವ ತೆಪ್ಪೋತ್ಸವ. ಮಹಾಮಹಿಮ ಕರ್ತೃ ಶ್ರೀ ಗವಿಸಿದ್ದೇಶನಲ್ಲಿ ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ. ಕಣ್ಮನ ಸೆಳೆಯುವ ಕೆರೆಯಲ್ಲಿ ಸುಂದರವಾಗಿ ಶೃಂಗಾರಗೊಂಡ ತೆಪ್ಪವು ತೊಟ್ಟಿಲಿನಂತೆ ತೇಲುತ್ತ ಶ್ರೀಗವಿಸಿದ್ದೇಶ್ವರನ ಭವ್ಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗಿತು, ಹಾಗೂ ಭಕ್ತರ ಕಣ್ಣುಗಳು ತಣಿಸಿತು.
ಸುಗಂಧ ಭರಿತ ಪುಷ್ಪಾಲಂಕಾರಗೊಂಡ ತೆಪ್ಪವು ನೋಡಲು ಸುಂದರ ಮನೋಹರವಾಗಿಕಾಣುತ್ತಿತ್ತು. ಶ್ರೀ ಗವಿಸಿದ್ದೇಶ್ವರರನ್ನು ಹೊತ್ತು ತೆಪ್ಪವು ಸಾಗಿ ಕೆರೆಯ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಭಕ್ತ ಜನಸ್ತೋಮ ದಿಂದ ನಾದಮಯವಾಗಿ ಹೊರಹೊಮ್ಮುವ ಗಂಗಾರತಿ ಗೀತೆ ಕರ್ಣಸ್ಪರ್ಶವಾದಾಗ ಸಾಕ್ಷಾತ್ ಶ್ರೀಗವಿಸಿದ್ದೇಶ್ವರ ಎಲ್ಲಾ ಭಕ್ತರನ್ನು ಹರಸುತ್ತಿದ್ದಾರೆ ಎಂಬ ಭಾವ ಭಕ್ತರಲ್ಲಿ ಮೂಡಿ ಪುಳಕಗೊಂಡು ಪುನೀತರಾದರು. ಶ್ರೀಮಠದ ಭಕ್ತರೆ ತೆಪ್ಪೋತ್ಸವಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.