ಮಂಗಳೂರು ; ಮಲ್ಲಿಕಾ ಕಲಾ ವೃಂದವು ಕದ್ರಿ ಶ್ರೀ ಮಂಜುನಾಥ ದೇವಾಲಯದ ಜಾತ್ರೆಯ ಸಂದರ್ಭ 10 ದಿನಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವನ್ನು ನೆರವೇರಿಸುವ ಉದ್ದೇಶದಿಂದ 1950ನೇ ವರ್ಷದಲ್ಲಿ ಸ್ಥಾಪನೆಗೊಂಡಿತು ಎಂದು ಸುಧಾಕರ್ ಪೆಜಾವರ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಲಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು ಕದ್ರಿ ಶ್ರೀ ಮಂಜುನಾಥ ದೇವಾಲಯದ ಆಡಳಿತ ವರ್ಗದವರು, ಮ್ಯಾನೇಜರರು ಮತ್ತು ಸಿಬ್ಬಂದಿವರ್ಗದವರು ಕಾರ್ಯಕ್ರಮಕ್ಕೆ ತುಂಬು ಹೃದಯದ ಸಹಕಾರವನ್ನು ನೀಡಿದ್ದು ಪ್ರಸ್ತುತ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಏ.ಜೆ.ಶೆಟ್ಟಿಯವರು ನಮ್ಮ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದಾರೆ ಎಂದು ಹೇಳಿದ್ದಾರೆ.
10 ಜನಗಳಲ್ಲಿ ಸುಮಾರು 110 ತಂಡಗಳ 3000 ಕಲಾವಿದರು ಕಾರ್ಯಕ್ರಮದಲ್ಲಿ ಭಾಗವತ್ತಿದ್ದು ಈ ವರ್ಷ ಬಾಲ ಪ್ರತಿಭೋತ್ಸವ, ಯುವ ಪ್ರತಿಭೋತ್ಸವ, ಮಹಿಳಾ ಪ್ರತಿಭೋತ್ಸವ, ಕನ್ನಡ-ತುಳು ನಾಟಕೋತ್ಸವ, ಪೌರಾಣಿಕ ಅಥವಾ ಚಾರಿತ್ರಿಕ ನಾಟಕಗಳು, ತೊಗಲು ಗೊಂಬೆ ಆಟ, ನೆರಳಿನಾಟ, ಯಕ್ಷಗಾನ ಗೊಂಬೆ ಆಟ, ಯಕ್ಷಗಾನ, ಮಹಿಳಾ, ಕಿಶೋರ ಯಕ್ಷಗಾನಗಳು, ನೃತ್ಯೋತ್ಸವ, ಹರಿಕಥೆ, ಪ್ರವಚನ, ಇಂದ್ರಜಾಲ ಪ್ರದರ್ಶನ, ದಾಸರ ಗೀತೆ, ಭಗವದ್ಗೀತೆ, ಕಂಠಪಾಠ ಸ್ಪರ್ಧೆ, ಯೋಗಾಸನ ಪ್ರದರ್ಶನ ಮುಂತಾದ ಕಾಯಕ್ರಮವನ್ನು ಸಂಯೋಜಿಸಲಾಗಿದೆ.
ಯಕ್ಷಗಾನದಲ್ಲಿ ತೆಂಕು, ಬಡಗು ಮತ್ತು ಬಡಾಬಡಗು ತಿಟ್ಟುಗಳ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನೀಡುತ್ತಿದ್ದುಹಿರಿಯ ಕಲಾವಿದರನ್ನೂ ಸನ್ಮಾನಿಸಿ, ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸಿ, ಅವರ ಪ್ರತಿಭೆಯನ್ನು ಪುರಸ್ಕರಿಸುವ ಮತ್ತು ಅಭಿನಂದಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕದ್ರಿ ಪರಿಸರದ ಸರಕಾರಿ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮತ್ತು ಮಕ್ಕಳಿಗೆ ದೇಶಭಕ್ತಿಗೀತೆ, ಚಿತ್ರಕಲಾ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸುವುದು, ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಸಹಾಯಧನ, ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಇತ್ಯಾದಿ ಹಮ್ಮಿಕೊಳ್ಳುವುದು. ಪರಿಸರ ಶುಚಿತ್ವ ಕಾರ್ಯ ಯೋಜನೆ, ಅಶಕ್ತ ಕಲಾವಿದರ ಕಳಕಳಿಗೆ ಅನುದಾನ, ಜಿಲ್ಲೆಗೆ ಆಗಮಿಸಿದ ಕಲಾ ತಂಡಗಳ ಕಾರ್ಯಕ್ರಮಗಳ ಸಂಯೋಜನೆ, ಸನ್ಮಾನ ಕಾರ್ಯವನ್ನು ಜೋಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಧ್ಯಕ್ಷ ಸುಧಾಕರ್ ಪೆಜಾವರ, ಎಂ.ರವೀಂದ್ರ ಶೆಟ್,ದಾಮೊದರ್ ರೈ, ವಾದಿರಾಜ್ ಆಚಾರ್ಯ, ಸುಮಾ ಪ್ರಾಸಾದ,ರವಿ ಅಲೆವೂರು ಉಪಸ್ಥಿತರಿದ್ದರು.