ನವದೆಹಲಿ : ಪ್ರೀತಿಗೆ ಗಡಿಪರಿಮಿತಿ ಇಲ್ಲವೆಂಬುದನ್ನು ಉತ್ತರಪ್ರದೇಶದ ಅಲಿಗಢದ ವ್ಯಕ್ತಿಯೊಬ್ಬರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಫೇಸ್ಬುಕ್ ಮುಖಾಂತರ ಪ್ರೀತಿಸಿದ ಮಹಿಳೆಯನ್ನು ಭೇಟಿಯಾಗಲು ೩೦ರ ಹರೆಯದ ಈ ವ್ಯಕ್ತಿ ಗಡಿದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಆದರೆ ಅಕ್ರಮವಾಗಿ ಗಡಿದಾಟಿದ ಆರೋಪದಲ್ಲಿ ಪಾಕಿಸ್ತಾನದ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.
ಅಲಿಗಢ ಜಿಲ್ಲೆಯ ನಾಗ್ಲಾ ಖಟ್ಕರಿ ಗ್ರಾಮದ ನಿವಾಸಿ ಬಾದಲ್ ಬಾಬು ಎಂಬವರನ್ನು ಪಾಕಿಸ್ತಾನದ ಪಂಜಾಬ್ ಪೊಲೀಸರು ಮಂಡಿ ಬಹೌದ್ಧೀನ್ ನಗರದಲ್ಲಿ ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಸಾಮಾಜಿಕ ಮಾಧ್ಯಮ ಮೂಲಕ ತಾನು ಪಾಕಿಸ್ತಾನ ಮಹಿಳೆ ಜೊತೆ ಪ್ರಣಯ ಸಂಬಂಧ ಬೆಳೆಸಿಕೊಂಡಿದ್ದನ್ನು ಒಪ್ಪಿಕೊAಡಿದ್ದಾರೆ. ಖುದ್ದಾಗಿ ಭೇಟಿಯಾಗುವ ಆತುರದಿಂದ ಮಾನ್ಯವಿಲ್ಲದ ವೀಸಾ ಹಾಗೂ ಪ್ರಯಾಣದ ದಾಖಲೆ
ಇಲ್ಲದೇ ಪಾಕಿಸ್ತಾನ ಪ್ರವೇಶಿಸಿದ್ದಾಗಿಯೂ ವಿವರಿಸಿದ್ದಾರೆ.
2024 ರ ಡಿಸೆಂಬರ್ 27ರಂದು ಬಾಬುವನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಹಿಂದೆಯೂ ಎರಡು ಬಾರಿ ಆತ ಪಾಕಿಸ್ತಾನ ಗಡಿ ದಾಟಲು ಪ್ರಯತ್ನಿಸಿರುವುದೂ ಬೆಳಕಿಗೆ ಬಂದಿದೆ.
ತಂದೆ ಕೃಪಾಲ್ ಸಿಂಗ್ ಹೇಳುವಂತೆ ದೀಪಾವಳಿಗೆ 20 ದಿನಗಳ ಮೊದಲು ಮನೆಗೆ ಬಂದಿದ್ದ. ಆನಂತರ ನವೆಂಬರ್ 30 ರಂದು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದ್ದ. ಬಾಬುವನ್ನು ಭಾರತಕ್ಕೆ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಪಾಕಿಸ್ತಾನ ಅಥವಾ ಭಾರತೀಯ ರಾಯಭಾರ ಕಚೇರಿಗಳು ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ತಿಳಿದಿದೆ.