ಪುತ್ತೂರು : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನೋರ್ವ ಅಪಸ್ವರವೆತ್ತಿದ ಕಾರಣಕ್ಕೆ ಆತನಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಈಶ್ವರಮಂಗಳ ಮೂಲದ ಯುವಕ, ಅಶೋಕ್ ರೈ ಅವರ ಬೆಂಬಲಿಗ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಎಂಬವರಿಗೆ ಆಡಿಯೋ ಮೂಲಕ ಜೀವ ಬೆದರಿಕೆಯೊಡ್ಡಿದ್ದಾರೆ. ಇದೀಗ ಜೀವ ಬೆದರಿಕೆಯೊಡ್ಡಿದ ಆ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಘಟನೆ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ಮೂಲಕ ಹಕೀಂ ಕೂರ್ನಡ್ಕ, ನಾನು ಅಪ್ಪಟ ಕಾಂಗ್ರೆಸ್ ಕಾರ್ಯಕರ್ತ. ನಾನು ನಮ್ಮದೇ ಸರ್ಕಾರ ಇದೆ. ನಮ್ಮದೇ ಶಾಸಕರು ಇದ್ದಾರೆ ಪುತ್ತೂರು ಅಭಿವೃದ್ಧಿ ಆಗಬಹುದು ಎಂದು ನಂಬಿದ್ದೆ. ಆದ್ರೆ ಅಶೋಕ್ ರೈಗಳು ಪುತ್ತೂರಿಗೆ ಬೇಕಾದ ರಸ್ತೆಯನ್ನ ಸರಿಪಡಿಸುತ್ತಿಲ್ಲ. ನಮಗೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸುತ್ತಿಲ್ಲ ಎಂದು ಅಸಮಾಧಾನಗೊಂಡು ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಚಕಾರವೆತ್ತಿದ್ದೇನೆ. ಆದ್ರೆ ಶಾಸಕರು ಅವರ ಸಂಸ್ಕøತಿಯನ್ನ ತೋರಿಸಿ ಕೊಟ್ಟಿದ್ದಾರೆ. ಶಾಸಕರು ಅಭಿವೃದ್ಧಿ ಮಾಡಿಲ್ಲ ಎಂಬುದರ ಬಗ್ಗೆ ಮಾತಾಡಿದ್ರೆ, ಅವರ ಬೆಂಬಲಿಗರು ಜೀವ ಬೆದರಿಕೆ ಹಾಕುವ ಮಟ್ಟಕ್ಕೆ ಇಳಿಯುತ್ತಾರೆ. ಹಾಗಾಗಿ ಈಗಾಗ್ಲೇ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಆದ್ರೆ ಅಶೋಕ್ ರೈಗಳ ಬೆಂಬಲಿಗರ ಜೀವ ಬೆದರಿಕೆಗೆಲ್ಲ ಕುಗ್ಗಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರೀಯಿಸಿದ್ದಾರೆ.
ಪುತ್ತೂರು ಶಾಸಕರು ಪಾರ್ಟ್ ಟೈಂ ರಾಜಕಾರಣಿ, ಅವರು ರಾಜಕೀಯವಾಗಿ ಅಷ್ಟು ಪಳಗಿದವರಲ್ಲ. ಒಂದೂವರೆ ವರ್ಷದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಕೇವಲ ಮೆಡಿಕಲ್ ಕಾಲೇಜು, ತುಳುವಿನ ಬಗ್ಗೆ ಸದನದಲ್ಲಿ ಮಾತಾಡಿದ್ರೆ ಅಭಿವೃದ್ಧಿ ಆಗಲ್ಲ. ಬದಲಾಗಿ ಮುಖ್ಯವಾಗಿ ಬೇಕಾದ ಮೂಲ ಸೌಕರ್ಯವನ್ನ ಒದಗಿಸಲು ಪ್ರಯತ್ನಪಡಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರಲ್ಲಿ ಪುತ್ತೂರಿನ ಅಭಿವೃದ್ಧಿಗಾಗಿ ಒತ್ತಾಯ ಮಾಡಬೇಕು. ಅದು ಬಿಟ್ಟು ಆಗದ್ದನ್ನ ಮಾತಾಡದೆ, ಅಭಿವೃದ್ಧಿ ಆಗುವ ಬಗ್ಗೆ ಮಾತಾಡೋದು ಉತ್ತಮ ಎಂದರು.
ಇನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನ ನೋಡಿ ಕಲಿಯಿರಿ ಅಂದಿದ್ದೆ. ಹೌದು ಆ ಹೇಳಿಕೆ ನಾನು ಈಗಲೂ ಬದ್ಧ. ರಾಜಕೀಯವಾಗಿ ಸಂಜೀವ ಮಠಂದೂರು ಉತ್ತಮ ಆಡಳಿತ ಕೊಟ್ಟವರು. ಪುತ್ತೂರಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹಾಗಾಗಿ ಮಾಜಿ ಶಾಸಕರನ್ನ ಅಶೋಕ್ ರೈ ನೋಡಿ ಕಲಿಯಲಿ ಎಂದು ಹೇಳಿದ್ದೇನೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದ್ರೆ ನಾನು ಕೋಮುವಾದಿ ಪಕ್ಷವನ್ನ ವಿರೋಧಿಸುತ್ತೇನೆ. ಅಭಿವೃದ್ಧಿಪಡಿಸಿದ ಯಾವುದೇ ಪಕ್ಷದ ಶಾಸಕನಾಗಲಿ ಅವರನ್ನ ಬೆಂಬಲಿಸುತ್ತೇನೆ. ಶಾಸಕ ಸಂಜೀವ ಮಠಂದೂರು ಅವರಿಗೆ ಯಾವುದೇ ಜಾತಿ ಭೇದ ಇಲ್ಲ. ಮುಸ್ಲಿಂ ಆಗಲಿ ಯಾವುದೇ ಜಾತಿಯಾಗಲಿ ಅವರ ಕಷ್ಟಕ್ಕೆ ಸಹಾಯ ಮಾಡಿದ್ದಾರೆ. ಜೊತೆಗೆ ಪುತ್ತೂರಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅದಕ್ಕೆ ನಾನು ಅವರನ್ನ ಉದಾಹರಣೆಕೊಟ್ಟು ಹೇಳಿದ್ದೇನೆ. ಆದ್ರೆ ಓರ್ವ ನನ್ನಂತ ಅಪ್ಪಟ ಕಾಂಗ್ರೆಸ್ ಕಾರ್ಯಕರ್ತ ಶಾಸಕರ ಕಾರ್ಯವೈಖರಿಯನ್ನ ಪ್ರಶ್ನಿಸುವುದರಲ್ಲಿ ತಪ್ಪೇನಿದೆ. ಅದಕ್ಕೆ ನನ್ನನ್ನ ಟಾರ್ಗೆಟ್ ಮಾಡಿ ಜೀವಬೆದರಿಕೆ ಹಾಕೋದು ಎಷ್ಟು ಸರಿ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ಅವರು ತಿಳಿಸಿದರು.