ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸಮೀಪದ ಶಿರಿಯಾ ಎಂಬಲ್ಲಿ ಶನಿವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದು ಬಿಜೆಪಿ ಮುಖಂಡ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಉಪ್ಪಳದ ಪ್ರತಾಪ್ ನಗರದ ನಿವಾಸಿ ಧನರಾಜ್ (40) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಧನರಾಜ್‌ಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಅವರನ್ನು ಬಂದ್ಯೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಬಳಿಕ ಪಾರ್ಥಿವ ಶರೀರವನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಧನರಾಜ್ ಕುಂಬಳೆ ಮಂಡಲ ಕಾರ್ಯದರ್ಶಿಯಾಗಿ ಬಿಜೆಪಿಯ ಸಕ್ರಿಯ ನಾಯಕರಾಗಿದ್ದರು. ಈ ಹಿಂದೆ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ, ಮಂಡಲ ಪ್ರಧಾನ ಕಾರ್ಯದರ್ಶಿ ಮುಂತಾದ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.