ರಾಯಚೂರು : ಪ್ರತಿನಿತ್ಯ ಕೆಲಸದ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗ ಖಾತ್ರಿ ಯೋಜನೆಯ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ ಎಂದು ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣ ದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲಾ ಘಟಕದಿಂದ ಶುಕ್ರವಾರ ಏರ್ಪಡಿಸಿದ್ದ ಒಂದು ದಿನದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಗ್ರಾಮೀಣ ಜನರಿಗೆ ನಿರಂತರವಾಗಿ ಕೂಲಿ ಕೆಲಸ ನೀಡುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳ ಅನುಷ್ಠಾನ ಮಾಡಲಾಗುತ್ತಿದೆ. ಅದೇ ರೀತಿ
ಶಾಲಾ ಕಾಂಪೌAಡ್, ಬಿಸಿಯೂಟದ ಕೊಠಡಿ, ಆಟದ ಮೈದಾನ ಸೇರಿ ಶಾಲೆಯ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಿಂದ ಮಾನವ ದಿನ ಸೃಜನೆಯಲ್ಲಿ ರಾಯಚೂರು ಜಿಲ್ಲೆ ನಿರಂತರವಾಗಿ ರಾಜ್ಯದಲ್ಲೇ ಪ್ರಥಮ, ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ನರೇಗಾ ಯೋಜನೆ ಜನರಿಗೆ ಸಮರ್ಪಕವಾಗಿ ಕೂಲಿ ಕೆಲಸ ನೀಡುವುದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲೆಯ ಎಲ್ಲ ನರೇಗಾ ನೌಕರರು ಶ್ರಮಿಸುತ್ತಿದ್ದು, ಅವರ ಒತ್ತಡ ನಿವಾರಣೆಗಾಗಿ ಒಂದು ದಿನದ ಕ್ರೀಡಾಕೂಟ ಏರ್ಪಡಿಸಿದೆ.
ಆದ್ದರಿಂದ ಎಲ್ಲ ನೌಕರರು ಈ ಒಂದು ದಿನದ ಮಟ್ಟಿಗೆ ಕೆಲಸದ ಒತ್ತಡವನ್ನು ಮರೆತು, ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶರಣ ಬಸವರಾಜ್ ಕೆಸರಟ್ಟಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣರ ಜೀವನ ಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಯೋಜನೆ ಅನುಷ್ಠಾನದಲ್ಲಿ ನೌಕರರ ಕೊಡುಗೆ ಅಪಾರವಾಗಿದೆ. ಈ ಒಂದು ದಿನದ ಕ್ರೀಡಾಕೂಟದಲ್ಲಿ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿಜಯ ಶಂಕರ್, ರಾಯಚೂರು ತಾಪಂ ಸಹಾಯಕ ನಿರ್ದೇಶಕ ಶಿವಪ್ಪ, ಮಾನ್ವಿ ತಾಪಂ ಇಒ ಖಲೀದ್ ಅಹ್ಮದ್, ಸಿರವಾರ ತಾಪಂ ಇಒ ಶಶಿಧರ್ ಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ್ ನಾಯಕ ಹಾಗೂ ಜಿಲ್ಲೆಯ ಎಲ್ಲ ನರೇಗಾ ನೌಕರರು ಇದ್ದರು. ತಾಂತ್ರಿಕ ಸಿಬ್ಬಂದಿ ಕಮಲಾ ನಿರೂಪಿಸಿದರು.