ನವದೆಹಲಿ : ಲೋಕಸಭೆಯಲ್ಲಿ ಶುಕ್ರವಾರ ನಡೆದ ಸಂವಿಧಾನ ಕುರಿತ ಚರ್ಚೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾವಾಗಲೂ ಸಂವಿಧಾನದ ಮೂಲ ತತ್ವಗಳನ್ನು ನಾಶಪಡಿಸಲು ಯತ್ನಿಸುವ ಕಾಂಗ್ರೆಸ್, ತನಿಖಾ ಸಂಸ್ಥೆಗಳ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ಸಹಿಸುವುದಿಲ್ಲ ಎಂದು ಹೇಳಿದರು. ಸಂವಿಧಾನ ರಚನೆಯಲ್ಲಿ ತೊಡಗಿಸಿ ಕೊಂಡಿದ್ದ ಹಲವಾರು ನಾಯಕರ ಕೊಡುಗೆಯನ್ನು ಉದ್ದೇಶಪೂರ್ವವಾಗಿಯೇ ನಿರ್ಲಕ್ಷಿಸಲಾಗಿದೆ. ಆ ಮೂಲಕ ಒಂದು ನಿರ್ದಿಷ್ಟ ಪಕ್ಷ ಸಂವಿಧಾನ ರಚನೆಯ ಶ್ರೇಯವನ್ನು `ಹೈಜಾಕ್’ ಮಾಡಲು ಯತ್ನಿಸಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಅನೇಕ ಸಂದರ್ಭಗಳಲ್ಲಿ ಸಂವಿಧಾನ ಹಾಗೂ ಅದರ ಮೂಲ ತತ್ವಗಳಿಗೆ ಕಾಂಗ್ರೆಸ್ ಅಗೌರವ ತೋರಿದೆ. ಸಂಸ್ಥೆಗಳ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ಕಾಂಗ್ರೆಸ್‌ಗೆ ಸಹಿಸಲಾಗುವುದಿಲ್ಲ. ಹಾಗಾಗಿ ಯಾವಾಗಲೂ ಸಂವಿಧಾನದ ಮೂಲ ತತ್ವಗಳನ್ನು ನಾಶಮಾಡಲು ಪ್ರಯತ್ನಿಸುತ್ತದೆ ಎಂದು ಆರೋಪಿಸಿದರು.
ಸಂವಿಧಾನ ರಕ್ಷಣೆ ಮಾತು ಕಾಂಗ್ರೆಸ್‌ನವರಿಂದ ಬರುವುದು ಸೂಕ್ತವಲ್ಲ ಎಂದ ರಾಜನಾಥ್ ಸಿಂಗ್, ಇತ್ತೀಚಿನ ದಿನಗಳಲ್ಲಿ ಅನೇಕ ವಿರೋಧ ಪಕ್ಷದ ನಾಯಕರು ಸಂವಿಧಾನವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದನ್ನು ನಾನು ನೋಡುತ್ತಿದ್ದೇನೆ. ತಲೆಮಾರುಗಳಿಂದ ಅವರ ಕುಟುಂಬದವರು ಕೂಡ ಸಂವಿಧಾನವನ್ನು ಪಾಕೆಟ್‌ನಲ್ಲಿಟ್ಟುಕೊAಡೇ ಬಂದಿದ್ದಾರೆ. ಹಾಗಾಗಿ ಅವರೂ ಬಾಲ್ಯದಿಂದ ಅದನ್ನೇ ಕಲಿತುಕೊಂಡು ಬಂದಿದ್ದಾರೆ ಎಂದರು.
ಆದರೆ ಬಿಜೆಪಿ ಯಾವಾಗಲೂ ಸಂವಿಧಾನದ ಮುಂದೆ ತಲೆಬಾಗುತ್ತದೆ. ಸಂಸ್ಥೆಗಳ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯೊಂದಿಗೆ ಎಂದಿಗೂ ಆಟವಾಡುವುದಿಲ್ಲ ಎಂದರು.