ಮುಂಬೈ : ಈ ತಂತ್ರಜ್ಞಾನ ಯುಗದಲ್ಲಿ ಸ್ಮಾರ್ಟ್‌ಫೋನ್ ಜನರಿಗೆ ಎಲ್ಲವೂ ಆಗಿದೆ. ಫೋನ್ ಬ್ಯಾಟರಿ ಖಾಲಿಯಾದರೆ ಸಾಕು ಜೀವನದಲ್ಲಿ ಏನೋ ಕಳೆದುಕೊಂಡಂತಾಗುತ್ತದೆ. ಹಾಗಾಗಿಯೇ, ಸ್ಮಾರ್ಟ್‌ಫೋನ್ ಖರೀದಿಸುವಾಗ ಮೊದಲು ಬ್ಯಾಟರಿ ಸಾಮರ್ಥ್ಯ ಹೇಗಿದೆ…? ಎಷ್ಟು ದಿನ ಬ್ಯಾಟರಿ ಬಾಳಿಕೆ ಬರುತ್ತದೆ..? ಒಮ್ಮೆ ಪೂರ್ತಿಯಾಗಿ ಚಾರ್ಜ್ ಆದರೆ ಎಷ್ಟು ಗಂಟೆಗಳ ಕಾಲ ಫೋನ್ ಚಾಲ್ತಿಯಲ್ಲಿರುತ್ತದೆ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತೇವೆ. ಜನರ ನಾಡಿ ಮಿಡಿತ ಅರಿತಿರುವ ಮೊಬೈಲ್ ಫೋನ್ ಕಂಪನಿಗಳು ಫೋನ್‌ಗಳನ್ನು 5-6ಸಾವಿರ mAh ಬ್ಯಾಟರಿ ಇದೆ ಎಂದು ಪ್ರಚಾರ ಮಾಡುತತ್ತವೆ. ಆದಾಗ್ಯೂ, ಅತಿಯಾಗಿ ಗೇಮಿಂಗ್ ಆಪ್ ಬಳಸುವುದು ಹಾಗೂ ವಿಡಿಯೋ ವೀಕ್ಷಣೆಯಿಂದಾಗಿ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಹಾಗೆಯೆ ಕೆಲವೊಂದು ಬ್ಯಾಟರಿಗಳು ಸಾಕಷ್ಟು ಪವರ್ ಬ್ಯಾಕ್ ಅಪ್ ಹೊಂದಿದ್ದರೂ ಕೂಡ ದೀರ್ಘಕಾಲ ಬ್ಯಾಟರಿ ಬಾಳಕೆ ಬರದಿರಲು ಹಲವು ಕಾರಣಗಳಿವೆ.
ಪ್ರಸ್ತುತ ಬರುವಂತಹ ಬ್ಯಾಟರಿಗಳೂ ಪೂರಕವಾಗಿ ಯಂತ್ರಾಂಶ (ಹಾರ್ಡ್‌ವೇರ್) ಮತ್ತು ತಂತ್ರಾಂಶ (ಸಾಫ್ಟ್‌ವೇರ್)ಗಳು ಚಾರ್ಜ್‌ನ ವೇಗ ಕಡಿಮೆ ಮಾಡಿಸುತ್ತಿದೆ. ಪ್ರಮುಖ ಸಾಧನಗಳಲ್ಲಿ ಚಿಪ್ ಸೆಟ್‌ಗಳ ವ್ಯವಸ್ಥೆಯು ಹೆಚ್ಚು ಬ್ಯಾಟರಿ ವ್ಯಯವಾಗುವಂತೆ ಮಾಡುತ್ತವೆ. ಹಾಗಂತ, ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಸದೇ ಇರಲು ಸಾಧ್ಯವೇ? ಖಂಡಿತವಾಗಿಯೂ ಇದು ಅಸಾಧ್ಯ..!
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಮೊಬೈಲ್‌ಫೋನ್‌ಗೆ ಡ್ರಗ್ಸ್‌ನ ರೀತಿಯಲ್ಲಿ ಅಡಿಕ್ಟ್ ಆಗಿದ್ದಾರೆ. ಹಾಗಾಗಿಯೇ, ಫೋನ್ ಬ್ಯಾಟರಿ ಕಡಿಮೆಯಾದೊಡನೆ ಅದನ್ನು ಚಾರ್ಜ್ ಗೆ ಹಾಕುವುದು, ಚಾರ್ಜ್ ನಲ್ಲಿ ಹಾಕಿದ್ದಾಗಲೂ ಅದನ್ನು ಬಳಸುವುದು. ಒಂದೊಮ್ಮೆ ಅನಿವಾರ್ಯವಾಗಿ ಫೋನ್ ಚಾರ್ಜ್ ಹಾಕಲು ವ್ಯವಸ್ಥೆ ಇಲ್ಲದಿದ್ದಾಗ ಬೇಗ ಸಿಟ್ಟಾಗುವ ಪ್ರವೃತ್ತಿ ಜನರಲ್ಲಿ ಹೆಚ್ಚಾಗುತ್ತಿದೆ.
ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಖಾಲಿಯಾಗಲು ಇವೇ ಪ್ರಮುಖ ಕಾರಣ:
ವಾಸ್ತವವಾಗಿ, ಸ್ಮಾರ್ಟ್‌ಫೋನ್ ಚಾರ್ಜ್ ಬೇಗನೆ ಖಾಲಿಯಾಗಲೂ ಹಲವು ಕಾರಣಗಳಿವೆ. ಅತಿಯಾದ ಫೋನ್ ಬಳಕೆ, ಸ್ಕ್ರೀನ್ ಬ್ರೈಟ್‌ನೆಸ್ ಹೆಚ್ಚಾಗಿಟ್ಟಿರುವುದು. ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ನಂತರ ಸಾಮಾಜಿಕ ಜಾಲತಾಣಗಳ ಗೀಳು, ಡೇಟಾ ಮತ್ತು ಆನ್ಲೈನ್ ಗೇಮ್, ಚಾಟಿಂಗ್, ವೀಡಿಯೋ ವೀಕ್ಷಣೆ ಹೀಗೆ ನಾನಾ ಕಾರಣಗಳಿಂದಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಖಾಲಿಯಾಗಿಬಿಡುತ್ತದೆ.
ಫೋನ್ ಕಂಪನಿಗಳ ಮುಖ್ಯ ಕಾರ್ಯವೇನೆಂದರೆ ಗ್ರಾಹಕರನ್ನು ಖುಷಿಪಡಿಸುವುದಾಗಿರುತ್ತದೆ. ಅದಕ್ಕಾಗಿಯೆ ” ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನೂ” ಅಳವಡಿಸಿ ನೋಡಿದ್ದಾರೆ. ಒಟ್ಟಾರೆಯಾಗಿ ವೇಗವಾಗಿ ಚಾರ್ಜ್ ಆಗಬೇಕು ಹಾಗೂ ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರಬೇಕೆಂಬುದು ಫೋನ್ ಬಳಕೆದಾರರ ಪ್ರಮುಖ ಬೇಡಿಕೆಯಾಗಿದೆ. ಹಾಗೆಯೇ, ಸ್ಮಾರ್ಟ್‌ಫೋನ್ ಎಲ್ಲಾ ಫೀಚರ್ ಗಳನ್ನು ಹೊಂದಿರಬೇಕು, ಅದು ಹೆಚ್ಚು ತೂಕವಾಗಿರದೆ ಸ್ಲಿಮ್ ಆಗಿ ಕಡಿಮೆ ತೂಕದ್ದಾಗಿರಬೇಕು ಎಂದು ಗ್ರಾಹಕರು ಬಯಸುತ್ತಾರೆ.
ಬಳಕೆದಾರರಿಗೆ ಅಗತ್ಯವಿರುವಂತೆ ಅವರಿಗಿಷ್ಟವಾದದ್ದನ್ನು ಕೊಡುವುದೇ ಫೋನ್ ತಯಾರಕರ ಗುರಿಯೂ ಆಗಿದೆ. ಹಾಗಾಗಿಯೇ, ಆಧುನಿಕ ತಂತ್ರಜ್ಞಾನದಲ್ಲಿ ಸ್ಮಾರ್ಟ್‌ಫೋನ್ ಗಳಲ್ಲಿ ಲೀಥಿಯಮ್ ಬ್ಯಾಟರಿಗಿಂತ ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನು ಅಳವಡಿಸಲು ಹಲವು ಪ್ರಯೋಗಗಳು ನಡೆದಿವೆ.
ಏನಿದು ಸಿಲಿಕಾನ್ ಕಾರ್ಬನ್ ಬ್ಯಾಟರಿ?
ವಾಸ್ತವವಾಗಿ, ಲಿಥೀಯಂ ಬ್ಯಾಟರಿಗಳಿಗಿಂತ ಸಿಲಿಕಾನ್ ಕಾರ್ಬನ್ ಬ್ಯಾಟರಿಗಳು ಕಡಿಮೆ ತೂಕದ್ದಾಗಿರುತ್ತವೆ. ಆದರೆ, ಲೀಥಿಯಮ್ ಬ್ಯಾಟರಿಯಲ್ಲಿ ಒಂದು ಗ್ರಾಂನಲ್ಲಿ 372mAh ಚಾರ್ಜ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ ಹಾಗೆಯೆ ಸಿಲಿಕಾನ್ ಬ್ಯಾಟರಿಯಲ್ಲಿ ಒಂದು ಗ್ರಾಂನಲ್ಲಿ ಗರಿಷ್ಠ470mAh ಪವರ್ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಿದೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಿಲಿಕಾನ್ ಕಾರ್ಬನ್ ಬ್ಯಾಟರಿಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಇದು ಅಧಿಕ ಸಾಮರ್ಥ್ಯದ ಪವರ್ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ರೆಡ್‌ಮಿಯ ಜಿ7 ಸರಣಿ, ಒಪೊ, ವಿವೊ, ಒನ್‌ಪ್ಲಸ್ ಹೀಗೆ ಮುಂತಾದ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸಿಲಿಕಾನ್ ಕಾರ್ಬನ್ ಆ್ಯನೋಡ್ ಬ್ಯಾಟರಿಗಳನ್ನು ಬಳಸಲಾಗುತ್ತಿದೆ.