ಅಹ್ಮದಾಬಾದ್ : ಸೋಡಿಯಂ ನೈಟ್ರೇಟ್ ಎನ್ನುವ ವಿಷಕಾರಿ ರಾಸಾಯನಿಕ ಬಳಸಿ 12 ಜನರ ಕೊಂದ ಗುಜರಾತಿನ ಮಾಂತ್ರಿಕ ಈಗ ಪೊಲೀಸ್ ಕಸ್ಟಡಿಯಲ್ಲೇ ಮೃತ ಪಟ್ಟಿದ್ದಾನೆ. ಡಿಸೆಂಬರ್ 3 ರಂದು ಆರೋಪಿ ನವಲ್ ಸಿನ್ಹಾ ಚಂದ್ ಅಪರಾಧ ಕೃತ್ಯ ಎಸಗಲು ತೆರಳುವಾಗ ವ್ಯವಹಾರದ ಪಾಲುದಾರ ನೀಡಿದ ಮಾಹಿತಿ ಆಧಾರದಲ್ಲಿ ಅಹ್ಮದಾಬಾದ್ ಪೊಲೀಸರು ಆತನನ್ನು ಬಂಧಿಸಿದ್ದರು.
ಆನಂತರ ಆರೋಪಿ ನವಲ್ ನನ್ನು ನ್ಯಾಯಾಲಯವು ಡಿಸೆಂಬರ್ 3 ರಂದು ಮಧ್ಯಾಹ್ನ 3 ರವರೆಗೆ ಪೊಲೀಸ್ ರಿಮಾಂಡ್‌ಗೆ ಒಪ್ಪಿಸಿದೆ. ಪೊಲೀಸರು ನಡೆಸಿದ ವಿಚಾರಣೆ ವೇಳೆ ಆತ ತಾನು 12 ಜನರನ್ನು ಕೊಂದಿರುವುದಾಗಿ
ತಪ್ಪೊಪ್ಪಿಕೊಂಡಿದ್ದಾನೆ. ತನ್ನಿಂದ ಸಾವಿ ಗೀಡಾದವರೆಲ್ಲರಿಗೂ ಸೋಡಿಯಂ ನೈಟ್ರೇಟ್ ವಿಷಕಾರಿ ರಾಸಾಯನಿಕವನ್ನು ಆಹಾರದಲ್ಲಿ ಸೇರಿ ಸೇವನೆ ಮಾಡುವಂತೆ ಮಾಡಿದ್ದಾಗಿಯೂ ಹೇಳಿಕೊಂಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಭಾನುವಾರ ಬೆಳಗ್ಗೆ ಆಪಾದಿತ ನವಲ್, ಪೊಲೀಸ್ ಕಸ್ಟಡಿಯಲ್ಲಿ ಅಸ್ವಸ್ಥನಾದ. ಆ ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಸೋಡಿಯಂ ನೈಟ್ರೇಟ್ ನೀರಿನಲ್ಲಿ ಕರಗುತ್ತದೆ. ಆದರೆ ಸೇವಿಸಿದ 20 ನಿಮಿಷಗಳಲ್ಲೇ ಅದು ಮನುಷ್ಯನ ದೇಹದ ಮೇಲೆ ಪರಿಣಾಮ ಬೀರಿ ಸಾಯುವಂತೆ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.