ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಎಂಡಿಎಂಎ ಸಾಗಿಸಿ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿದಂತೆ ಇಬ್ಬರು ಮಾದಕ ದ್ರವ್ಯ ದಂಧೆಕೋರರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 200 ಗ್ರಾಂ ಎಂಡಿಎಂಎ, ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಕ್ಬಾಲ್ ಎಂಬಾತನನ್ನು ಬಜಪೆ ಪೊಲೀಸರು ಬಂಧಿಸಿದ್ದು ಈ ಪ್ರಕರಣದಲ್ಲಿ ಆರೋಪಿಗಳಿಗೆ ಎಂಡಿಎಂಎನ್ನು ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ಗಳ ಬಗ್ಗೆ ಮಾಹಿತಿ ಲಭಿಸಿತ್ತು. ಅದರಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಮೈಸೂರಿನ ದರ್ಶನ್ ಕೆ.ಜಿ(25) ಮತ್ತು ನೈಜೀರಿಯಾ ಪ್ರಜೆಯಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದ ಚಿಕ ಜೋಸೇಫ್ ಇಝಿ(26)ನನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ, ಪಿಎಸ್‌ಐ ಸುದೀಪ್ ಎಂ.ವಿ, ಎಎಸ್‌ಐ ರಾಮ ಪೂಜಾರಿ ಮತ್ತು ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.ಆರೋಪಿಗಳ ವಶದಿಂದ 10 ಲ.ರೂ. ಮೌಲ್ಯದ ಎಂಡಿಎಂಎ, ಮಾರುತಿ ಬಲೆನೋ ಕಾರು, 5 ಮೊಬೈಲ್ ಫೋನ್ ಗಳು, ವಿವಿಧ ಬ್ಯಾಂಕ್‌ಗಳ 5 ಡೆಬಿಟ್ ಕಾರ್ಡ್ ಗಳು, 7 ಸಿಮ್ ಕಾರ್ಡ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 18,25,500 ರೂ.ಗಳು ಆಗಬಹುದು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.ಕಾರ್ಯಾಚರಣೆಯನ್ನು ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್ ಐ ಸುದೀಪ್ ಎಂವಿ, ಎಎಸ್ ಐ ರಾಮ್ ಪೂಜಾರಿ ಮತ್ತು ಇತರ ಸಿಸಿಬಿ ಸಿಬ್ಬಂದಿ ಉಪಸ್ಥಿತರಿದ್ದರು.