ಚಿಕ್ಕಮಗಳೂರು : ದತ್ತಪೀಠದಲ್ಲಿ ದತ್ತಜಯಂತಿ ವಿಶ್ವಹಿಂದೂ ಪರಿಷದ್,ಬಜರಂಗದಳದ ನೇತೃತ್ವದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಈ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಡಿ. 11ರಿಂದ 14 ವರೆಗೆ ಈ ನಾಲ್ಕು ದಿನಗಳ ಕಾಲ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ಸಂಪೂರ್ಣ
ನಿರ್ಬAಧ ಹೇರಿದೆ.ಡಿ. 15 ರ ಬೆಳಗ್ಗೆ 10 ಗಂಟೆ ನಂತರ ಚಿಕ್ಕಮಗಳೂರು ತಾಲೂಕಿನ ಪಶ್ಚಿಮಘಟ್ಟಗಳ ಸಾಲು ಮುಳ್ಳಯ್ಯನಗಿರಿ, ದತ್ತಪೀಠ ಭಾಗ ಪ್ರವಾಸಿಗರಿಗೆ ಮುಕ್ತವಾಗಲಿದೆ ಎಂದು ತಿಳಿಸಲಾಗಿದೆ.
ದತ್ತ ಪೀಠದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ 9 ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ. ಅದರಲ್ಲಿ 12,13,14 ಈ ಮೂರು ದಿನಗಳು ಸೂಕ್ಷ್ಮ ದಿನಗಳು ಎನ್ನಲಾಗಿದೆ. ಈ ಮೂರು ದಿನಗಳ ಕಾಲ ದತ್ತಪೀಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ವಾಹನಗಳು ಮತ್ತು ದತ್ತ ಮಾಲಾಧಾರಿ ವಾಹನಗಳಿಂದ ಜನದಟ್ಟಣೆ ಆಗಬಾರದು. ಅಲ್ಲದೆ ಭದ್ರತೆ ದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಡಿಸೆಂಬರ್ 12 ರಂದು ನಗರದ ದತ್ತಪೀಠದಲ್ಲಿ ಅನುಸೂಯಾ ಜಯಂತಿಯಲ್ಲಿ ಸಾವಿರಾರು ಮಹಿಳೆಯರು ಹೋಮ-ಹವನ ನಡೆಸಲಿದ್ದಾರೆ. 13 ರಂದು ಚಿಕ್ಕಮಗಳೂರು ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಭಕ್ತರು ಭಕ್ತರು ಹಾಗೂ ಸಾರ್ವಜನಿಕರೊಂದಿಗೆ ಭವ್ಯ ಮೆರವಣಿಗೆ ನಡೆಸಲಿದ್ದಾರೆ.
14 ರಂದು ರಾಜ್ಯದ ವಿವಿಧೆಡೆಯಿಂದ 25 ಸಾವಿರಕ್ಕೂ ಹೆಚ್ಚು ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕದ ದರ್ಶನ ಪಡೆಯಲಿದ್ದಾರೆ. ಕಾರ್ಯಕ್ರಮ ಮುಗಿಯುವವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಪೊಲೀಸರು ದತ್ತಪೀಠಕ್ಕೆ ಸೇರಿ ಜಿಲ್ಲೆಯಾದ್ಯಂತ ಸರ್ಪಗಾವಲಿನ ಭದ್ರತೆ ಏರ್ಪಡಿಸಿದ್ದಾರೆ.