ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣ ಪಟ್ಟಣದ ಚರ್ಚ್ ಮೇಲೆ ಮಂಗಳವಾರ ಸಂಜೆ ನಡೆದ ದಾಳಿ ಪ್ರಕರಣದ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಸೀಮಾ ಅವರು ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಮಾಜಿ ಶಾಸಕ ಕೆ.ವೆಂಕಟೇಶ್ ಅವರು ಎಸ್ಪಿ ಅವರನ್ನು ಭೇಟಿ ಮಾಡಿ ದುಷ್ಕರ್ಮಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚುವಂತೆ ಒತ್ತಾಯಿಸಿದರು.
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಸೇಂಟ್ ಮೇರಿ ಚರ್ಚ್‌ನ ಫಾದರ್ ಜಾನ್ ಪಾಲ್ ನೀಡಿದ ದೂರಿನ ಪ್ರಕಾರ, ಕ್ರಿಸ್‌ಮಸ್‌ಗಾಗಿ ನಿರ್ಮಿಸಲಾದ ತೊಟ್ಟಿಲಲ್ಲಿ ಇರಿಸಲಾಗಿದ್ದ ಶಿಶು ಯೇಸುವಿನ ಪ್ರತಿಮೆಯನ್ನು ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.
ತೊಟ್ಟಿಲನ್ನೂ ಎಸೆದ ದುಷ್ಕರ್ಮಿಗಳು ಕೊಟ್ಟಿಗೆ ಮುಂಭಾಗದಲ್ಲಿ ಅಲಂಕಾರಕ್ಕಾಗಿ ಇಟ್ಟಿದ್ದ ಪಾತ್ರೆಗಳು ಹಾಗೂ ಗಾಜಿನ ಕಲಾಕೃತಿಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಕಾಣಿಕೆ ಡಬ್ಬವನ್ನೂ ತೆಗೆದುಕೊಂಡು ಹೋಗಿದ್ದಾರೆ.


