ಬೆಂಗಳೂರು : ಸಿಬ್ಬಂದಿಗೆ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ನಗರದ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ.
ಬಡವರ ಹಸಿವು ನೀಗಿಸಲೆಂದೇ ೨೦೧೭ರಲ್ಲಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗಳು ಆರAಭದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು. ಊಟ ಸರಬರಾಜಿಗಾಗಿ ಬಾಕಿ ನೀಡುತ್ತಿಲ್ಲ ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟಿನ್‌ಗಳಿಗೆ ಕಳಪೆ ಊಟ ಸರಬರಾಜಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದಾದ ನಂತರ ಅನುದಾನ ಸಮರ್ಪವಾಗಿ ಸಿಗದೆ ಜನರಿಗೆ ಉತ್ತಮ ಆಹಾರ ಸಿಗದೇ ಇದ್ದ ಕಾರಣ ಬಹುತೇಕರು ಇಂದಿರಾ ಕ್ಯಾಂಟಿನ್‌ಗಳತ್ತ ಮುಖ ಮಾಡುವುದನ್ನೇ ನಿಲ್ಲಿಸಿದರು.
ಈಗ ಬುಧವಾರದಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಪೂರೈಕೆ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಊಟ ಪೂರೈಕೆಯಾಗುತ್ತಿಲ್ಲ.ಕ್ಯಾಂಟೀನ್ ಸಿಬ್ಬಂದಿಗೆ ಆರು ತಿಂಗಳ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ಊಟ ಕೂಡ ಪೂರೈಕೆಯಾಗುತ್ತಿಲ್ಲ. ಪಶ್ಚಿಮ ವಲಯದ ಮಲ್ಲೇಶ್ವರಂ,ನಂದಿನಿಲೇಔಟ್ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್ ಗಳಿಗೆ ಊಟ ಪೂರೈಕೆಯಾಗುತ್ತಿಲ್ಲ. ಈ ಕಿಚನ್‌ಗಳನ್ನು ಚೆಫ್ ಟಾಕ್ ಕಂಪನಿ ನಿರ್ವಹಣೆ ಮಾಡುತ್ತಿದೆ. ಈ ಕಂಪನಿಗೆ ಬಿಬಿಎಂಪಿ ಹಣ ಪಾವತಿ ಮಾಡಲಿಲ್ಲ. ಪಾಲಿಕೆ, ಚೆಫ್ ಟಾಕ್ ಕಂಪನಿಗೆ ಹಣ ನೀಡದ ಕಾರಣ ಸಿಬ್ಬಂದಿಗೂ ಸಂಬಳ ಸಿಗದೇ ಕಂಗಾಲಾಗಿದ್ದಾರೆ.
ಮಂತ್ರಿ ಮಾಲ್ ಬಳಿ, ಸುಭಾಶ್ ನಗರ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಸಮೀಪ, ಗಾಂಧಿನಗರ, ಅರಮನೆ ನಗರ, ಸರ್ಕಲ್ ಮಾರಮ್ಮ ದೇವಸ್ಥಾನ ಯಶವಂತಪುರ ರಸ್ತೆ, ಮಲ್ಲೇಶ್ವರಂ ಇಂದಿರಾ ಕ್ಯಾಂಟಿನ್‌ಗಳಿಗೆ ಬೀಗ ಬಿದ್ದಿದೆ.