ಉಡುಪಿ : ನ.13ರಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪುವಿನ ಮಿಲಿಟರಿ ಕಾಲೋನಿಯಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಆಟೋ ಚಾಲಕನ ಸಾವಿಗೆ ಕಾರಣವಾದ ಹಿಟ್ ಅಂಡ್ ರನ್ ಘಟನೆಗೆ ಸಂಬಂಧಿಸಿದಂತೆ ಬೆಳಪುವಿನ ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ಅಪಘಾತದಲ್ಲಿ ಮೊಹಮ್ಮದ್ ಹುಸೈನ್ (39) ಎಂಬುವರು ಮೃತಪಟ್ಟಿದ್ದು . ಪ್ರಜ್ವಲ್ ಶೆಟ್ಟಿ ತನ್ನ ಥಾರ್ ಜೀಪಿನಿಂದ ಮೊಹಮ್ಮದ್ ಹುಸೈನ್ ಅವರ ಬೈಕ್ಗೆ ಗುದ್ದಿ ಪರಾರಿಯಾಗಿದ್ದನು .
ವರದಿಗಳ ಪ್ರಕಾರ, ಹುಸೇನ್ ಆ ದಿನ ಮುಂಜಾನೆ ತನ್ನ ದ್ವಿಚಕ್ರ ವಾಹನದಲ್ಲಿ ಪುಂಚಲ್ಕಾಡುವಿನಿಂದ ಬೆಳಪುಗೆ ಹೋಗುತ್ತಿದ್ದರು. ಮರಿಯಾ ಬೇಕರಿ ಬಳಿ ಬರುತ್ತಿದ್ದಂತೆಯೇ ಅಪರಿಚಿತ ವಾಹನ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಹುಸೇನ್ ಅವರ ಕಾಲು, ಕೈ, ತಲೆಗೆ ತೀವ್ರ ಗಾಯಗಳಾಗಿವೆ. ಮೊದಲಿಗೆ ಅವರನ್ನು ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು .
ಅಪಘಾತದ ಗಂಭೀರತೆಯನ್ನು ಸೆರೆಹಿಡಿಯುವ ಸಿಸಿಟಿವಿ ದೃಶ್ಯಾವಳಿಗಳನ್ನು ನಂತರ ಪಡೆಯಲಾಗಿದ್ದು, ತನಿಖೆಗೆ ನೆರವಾಗಿದೆ. ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ.ವಿಚಾರಣೆ ವೇಳೆ ಆರೋಪಿ ಪ್ರಜ್ವಲ್ ಶೆಟ್ಟಿ ನಿದ್ದೆ ಮಂಪರಿನಲ್ಲಿ ಅಪಘಾತ ನಡೆದಿದೆ ಎಂದು ಹೇಳಿದ್ದಾನೆ. ವಿಚಾರಣೆ ಬಳಿಕ, ಆರೋಪಿ ಪ್ರಜ್ವಲ್ ಶೆಟ್ಟಿಯನ್ನು ಠಾಣೆಯ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಕರೆದಾಗ ವಿಚಾರಣೆಗೆ ಹಾಜರಾಗಲು ಶಿರ್ವ ಪೊಲೀಸರ ಸೂಚನೆ ನೀಡಿದ್ದಾರೆ.


