ಮೈಸೂರು : ಮೈಸೂರನಲ್ಲಿ ಹುಣ್ಣಿಮೆ ವಾಮಾಚಾರಕ್ಕೆ ವ್ಯಕ್ತಿ ಬಲಿಯಾದ ಘಟನೆ ವರದಿಯಾಗಿದೆ. ಕತ್ತು ಕುಯ್ದು ಯುವಕನನ್ನ ಕಿರಾತಕರು ಬಲಿಪಡೆದು ಹುಣ್ಣಿಮೆ ದಿನವಾದ ಕಾರಣ ವಾಮಾಚಾರ ನಡೆಸಿ ಕೊಲೆ ಮಾಡಿದ್ದಾರೆ . ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮ ಸರ್ಕಾರಿ ಪ್ರೌಢಶಾಲೆಯ ಸಮೀಪದಲ್ಲಿ ಈ ಘಟನೆ ನಡೆದಿದೆ.
ನಂಜನಗೂಡಿನಲ್ಲಿ ಮೂಢನಂಬಿಕೆ ,ಕಂದಾಚಾರ ,ವಾಮಾಚಾರ ದಂತಹ ಘಟನೆಗಳು ದಿನೇದಿನೇ ಹೆಚ್ಚುತ್ತಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ. ಕೊಲೆಗಡುಕರು ಯುವಕನ ಕತ್ತು ಕೊಯ್ದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಸಂದರ್ಭದಲ್ಲಿ ಯುವಕನ ಜೀವ ಬದುಕಿಸಲು ಆಂಬುಲೆನ್ಸ್ ಮೂಲಕ ನಂಜನಗೂಡಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಯುವಕ ಮೃತಪಟ್ಟಿದ್ದಾನೆ.
ಮೃತ ದುರ್ದೈವಿಯನ್ನು ಮಲ್ಕುಂಡಿ ಗ್ರಾಮದ ಸದಾಶಿವ 43 ವರ್ಷದ ಎಂದು ತಿಳಿದಿದೆ. ಮೃತಪಟ್ಟ ಸದಾಶಿವ ರವರು ಕಷ್ಟಪಟ್ಟು ಗಾರೆ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳನ್ನು ಸಾಕಿ ಸಲಹುತಿದ್ದರು ಎಂದು ತಿಳಿದಿದೆ. ಘಟನಾ ಸ್ಥಳದಲ್ಲಿ ಬಾರಿ ಪ್ರಮಾಣದಲ್ಲಿ ರಕ್ತ ಚಲ್ಲತೊಡಗಿದೆ ಎಲೆ ಮತ್ತು ಅಡಿಕೆಯ ಜೊತೆ 101ರು ಹಣವನ್ನು ಇಡಲಾಗಿದ್ದು ನಿಂಬೆಹಣ್ಣುಗಳು ಪ್ರತ್ಯಕ್ಷವಾಗಿವೆ.
ರಕ್ತದ ಮಡುವಿನಲ್ಲಿ ನರಳುತ್ತಿದ್ದ ವ್ಯಕ್ತಿಯು ಗ್ರಾಮದ ಪ್ರೌಢಶಾಲೆಯ ಸಮೀಪದಲ್ಲಿರುವ ತಮ್ಮ ಜಮೀನಿಗೆ ತೆರಳುತ್ತಿದ್ದ ನಿವಾಸಿಯ ಕಣ್ಣಿಗೆ ಬಿದ್ದು ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರೌಢಶಾಲೆಯ ಸಮೀಪದ ನೀರು ಹರಿಯುವ ಹಳ್ಳದ ಪೊದೆಯಲ್ಲಿ ರಕ್ತ ಸ್ರಾವದಿಂದ ನರಳಾಟದಲ್ಲಿ ನರಳುತ್ತಿದ್ದ ವ್ಯಕ್ತಿನನ್ನು ನೋಡಿದ ಸ್ಥಳೀಯ ನಿವಾಸಿ ಒಬ್ಬರು ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ. ವಿಚಾರ ತಿಳಿದ ಬಳಿಕ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದನೆಂದು ತಿಳಿದುಬಂದಿದೆ. ಸ್ಥಳಕ್ಕೆ ನಂಜನಗೂಡಿನ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಆಂಬುಲೆನ್ಸ್ ಮೂಲಕ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.