ಚಿಕ್ಕಮಗಳೂರು : ವಯನಾಡು ಗುಡ್ಡ ಕುಸಿತ,ಅಂಕೋಲಾದ ಶಿರೂರು, ಶಿರಾಡಿ ಘಾಟ ಭೂಕುಸಿತದ ನಂತರ ಎಚ್ಚೆತ್ತ ಸರ್ಕಾರ ಇದೀಗ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ತೆರವುಗೊಳಿಸಲು ಸಿದ್ಧತೆ ನಡೆಸಿದೆ. ಈ ಹಿಂದೆ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, 2015ರ ನಂತರದ ಅರಣ್ಯ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವಂತೆ ಸೂಚನೆ ನೀಡಲಾಗಿದ್ದು ಜತೆಗೆ ಒಂದು ತಿಂಗಳ ಒಳಗೆ ಈ ಕ್ರಮ ಕೈಗೊಂಡ ಕುರಿತು ವರದಿ ನೀಡುವಂತೆ ಗಡುವು ವಿಧಿಸಲಾಗಿತ್ತು.
ಸ್ವಾಭಾವಿಕ, ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಕಾಫಿ ತೋಟ, ಮನೆ, ಹೋಂಸ್ಟೇ, ರೆಸಾರ್ಟ್ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್ ಮರಗಳ ಕಡಿತಲೆ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಇಂತಹ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತು.
ಇದೀಗ ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ಸ್ವಾಮಿ ದರ್ಗಾ, ಚಂದ್ರದ್ರೋಣ ಮುಳ್ಳಯ್ಯನಗಿರಿ ಪರ್ವತದ ಸುತ್ತಮುತ್ತ ನಿರ್ಮಾಣವಾಗಿರುವ ಹೋಂಸ್ಟೇ, ರೆಸಾರ್ಟ್ ಮಾಲಿಕರು ತಮ್ಮ ಹೋಂಸ್ಟೇಗೆ ಸಂಬಂಧಿಸಿದ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವಂತೆ ಡಿಎಫ್ಒ ರಮೇಶ್ ಬಾಬು ಅವರು ನೋಟಿಸ್ ನೀಡಿದ್ದಾರೆ.
ಅರಣ್ಯ ವಲಯ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದು ಈ ವೇಳೆ ಸುಮಾರು 30 ಅನಧಿಕೃತ ರೆಸಾರ್ಟ್, ಹೋಂಸ್ಟೇ ಪತ್ತೆಯಾಗಿವೆ. ಚಂದ್ರದ್ರೋಣ ಪರ್ವತದ ಸಾಲಿನ ಹುಕ್ಕುಂದ, ಮಲ್ಲೇನಹಳ್ಳಿ, ಅರಿಶಿಣಗುಪ್ಪೆ, ಅಲ್ಲಂಪುರ ಭಾಗದಲ್ಲಿ ಈ ಹೋಂಸ್ಟೇ ಪತ್ತೆಯಾಗಿದ್ದು ಈ ಅನಧಿಕೃತ ಅರಣ್ಯ ಇಲಾಖೆ ಹೋಂ ಸ್ಟೇ, ರೆಸಾರ್ಟ್ ತೆರವಿಗೆ ತಯಾರಿ ನಡೆಸಿದೆ.