Thursday, November 21, 2024
Flats for sale
Homeರಾಶಿ ಭವಿಷ್ಯಮೈಸೂರು : ಕೇಡಿನ ವಿರುದ್ಧ ಒಳಿತಿನ ಜಯವೆಂಬ ‘ವಿಜಯದಶಮಿ’ ಹಬ್ಬದ ಚರಿತ್ರೆ,ದಸರಾ ಇತಿಹಾಸ, ಹಬ್ಬದ ಸಂಪ್ರದಾಯಗಳು...

ಮೈಸೂರು : ಕೇಡಿನ ವಿರುದ್ಧ ಒಳಿತಿನ ಜಯವೆಂಬ ‘ವಿಜಯದಶಮಿ’ ಹಬ್ಬದ ಚರಿತ್ರೆ,ದಸರಾ ಇತಿಹಾಸ, ಹಬ್ಬದ ಸಂಪ್ರದಾಯಗಳು ಮತ್ತು ಪ್ರಾಮುಖ್ಯತೆ ಇಲ್ಲಿದೆ ನೋಡಿ …!

ಮೈಸೂರು : 15 ನೇ ಶತಮಾನದಲ್ಲೇ ವಿಜಯನಗರ ಅರಸರ ಕಾಲದಲ್ಲಿ ದಸರಾ ಹಬ್ಬಗಳು ಆರಂಭವಾದವು. ಈ ಉತ್ಸವವು 14 ನೇ ಶತಮಾನದ ವಿಜಯನಗರ ಸಾಮ್ರಾಜ್ಯದಲ್ಲಿ ಐತಿಹಾಸಿಕ ಪಾತ್ರವನ್ನು ವಹಿಸಿದೆ. ಅಲ್ಲಿ ಇದನ್ನು ಮಹಾನವಮಿ ಎಂದು ಕರೆಯಲಾಗುತ್ತಿತ್ತು ಮತ್ತು ಹಂಪಿಯ ಹಜಾರ ರಾಮ ದೇವಾಲಯದ ಹೊರಗೋಡೆಯ ಪರಿಹಾರ ಕಲಾಕೃತಿಯಲ್ಲಿ ಉತ್ಸವಗಳನ್ನು ತೋರಿಸಲಾಗಿದೆ. ದಸರಾ ಹಬ್ಬ ಮೊದಲು ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ. ಅಲ್ಲಿಂದ ಶ್ರೀರಂಗಪಟ್ಟಣ ಹಾಗೂ ಮೈಸೂರಿಗೆ ಬಂದಿತು. ಕೃಷ್ಣದೇವರಾಯ ಶಕ್ತಿ, ಸಾಮರ್ಥ್ಯದ ಆಧಾರದ ಮೇಲೆ ವಿಜಯದಶಮಿ ವಿಶ್ವವಿಖ್ಯಾತಿಯಾಯಿತು. ವಿಜಯದಶಮಿ ದಿನ ಕೃಷ್ಣದೇವರಾಯ ಕುದುರೆ ಮೇಲೆ ಕುಳಿತು ಜನಸ್ತೋಮದ ನಡುವೆ ಸಾಗುತ್ತಿದ್ದರೆ, ಆತನ ಸಾಮ್ರಾಜ್ಯದ ಸುತ್ತಲ ಆಸ್ತಿಕ ರಾಜರು ತಮ್ಮ ಸೈನ್ಯವನ್ನು ಕರೆತಂದು ನಮಸ್ಕರಿಸುತ್ತಿದ್ದರು ಎಂದು ಆಗಿನ ಪರ್ಷಿಯನ್ ರಾಯಭಾರಿ ಅಬ್ದುಲ್ ರಝಾಕ್ ಬರೆದುಕೊಂಡಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವಿಜಯದಶಮಿ ಅತ್ಯಂತ ಬೃಹತ್‌ ಸಾಮ್ರಾಜ್ಯವೆಂದು, ಬಹುಕಾಲ ಆಳ್ವಿಕೆ ನಡೆಸಿದ ಸಾಮ್ರಾಜ್ಯವೆಂದೂ ಹೆಸರಾಗಿರುವ, ಕರ್ನಾಟಕದ ಇತಿಹಾಸದಲ್ಲೇ ಸುವರ್ಣಯುಗವನ್ನು ಸೃಷ್ಟಿಸಿ, ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದ ಕರ್ನಾಟಕ ಸಾಮ್ರಾಜ್ಯ ಅರ್ಥಾತ್‌ ವಿಜಯನಗರ ಸಾಮ್ರಾಜ್ಯದ ಅರಸರು ಆರಂಭಿಸಿದ್ದ ನವರಾತ್ರಿ ಹಬ್ಬ ಹಾಗೂ ವಿಜದಶಮಿ ಆಚರಣೆಗೆ ವರ್ಣಮಯ ಕಳೆ ಬಂದದ್ದು ಪ್ರಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ. ಈ ಮಹೋತ್ಸವದ ಕೇಂದ್ರಗಳಾಗಿ ನಿರ್ಮಾಣವಾದದ್ದೇ ಮಹಾನವಮಿ ದಿಬ್ಬ. ತಮ್ಮ ಶೌರ್ಯ-ಪರಾಕ್ರಮಗಳನ್ನು, ವೀರತ್ವ, ಧೀರತ್ವವನ್ನು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ. ಹೀಗೆ ಸರ್ವ ವಿಧಗಳಲ್ಲೂ ತಾವು ಶಕ್ತರು, ಪ್ರತಿಭಾವಂತರೆಂದು ತಮ್ಮ ಹಿರಿಮೆಯನ್ನು ತೋರ್ಪಡಿಸಿಕೊಳ್ಳಲು ಈ ಮಹಾನವಮಿ ದಿಬ್ಬದಲ್ಲಿ ಸತತ ಹತ್ತೂ ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು.

ಕೃಷ್ಣ ದೇವರಾಯನ ಕಾಲದಲ್ಲಿ ನಡೆಯುತಿದ್ದ ಹಂಪೆಯ ಮಹಾನವಮಿ ದಿಬ್ಬ….

ದಸರಾ ಮಹೋತ್ಸವ ಕರುನಾಡಿನ ಸಾಂಸ್ಕೃತಿಕ ಪರಂಪರೆಗೆ ಹಿಡಿದ ಕೈಗನ್ನಡಿ. ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯದ ಸಮ್ಮಿಶ್ರಣದೊಂದಿಗೆ ಕರ್ನಾಟಕದ ಶ್ರೀಮಂತ ಪರಂಪರೆ ನಾಡಹಬ್ಬದಲ್ಲಿ ಅನಾವರಣಗೊಳ್ಳುತ್ತದೆ. ರಾಜವೈಭೋಗ ಮರುಕಳುಸುತ್ತದೆ. ನವರಾತ್ರಿ ನವದುರ್ಗೆಯರ ಪೂಜೆ, ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಭಕ್ತಿ-ಭಾವದಿಂದ ಸ್ಮರಿಸಲಾಗುತ್ತದೆ. ದಸರಾಗೂ ನಾಡಿನ ಜನತೆಗೂ ಭಾವನಾತ್ಮಕ ನಂಟಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಜನರು ಬರುತ್ತಾರೆ.

ವಿಜಯನಗರದ ಆಳ್ವಿಕೆಗೆ ಒಳಪಟ್ಟ ಸಾಮಂತ ರಾಜರನ್ನೂ, ಮಾಂಡಲಿಕರನ್ನು ಹಾಗೂ ತಮ್ಮ ಸೇನಾ ಬಲಕ್ಕೆ ಶಕ್ತಿ ತುಂಬುತ್ತ ಹಾಗೂ ಸಾಮ್ರಾಜ್ಯಕ್ಕೆ ಆರ್ಥಿಕವಾಗಿ ಸಹಾಯ ಮಾಡುವವರನ್ನೆಲ್ಲಾ ಒಂದೆಡೆ ಸೇರಿಸಿ ಕಪ್ಪ ಸಂಗ್ರಹಣೆ ಮಾಡಲಿಕ್ಕೆಂದೇ ನಿಗದಿತ ಕಾಲವೊಂದನ್ನು ಗೊತ್ತು ಮಾಡಲಾಗಿತ್ತು. ಆ ಕಾಲವೆ ಅಶ್ವಯುಜ ಮಾಸದ ಪಾಡ್ಯಮಿಯಿಂದ ನವಮಿಯವರೆಗಿನ ಒಂಭತ್ತು ದಿನಗಳು. ಕಡೆಯ ದಿನ ಅಂದರೆ ದಶಮಿಯ ದಿನ ಅರಸನು, ಮಹಾನವಮಿ ದಿಬ್ಬದ ಮೇಲೆ ಕುಳಿತು ಸಂದಾಯವಾಗುತ್ತಿದ್ದ ಕಾಣಿಕೆಗಳನ್ನು ಸ್ವೀಕರಿಸುತ್ತ, ಜರುಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು ಎಂಬುದು ಇತಿಹಾಸ.

ವಿಜಯನಗರ ಮತ್ತು ಮಹಾನವಮಿ ಕುರಿತು ವಿವಿಧ ದೇಶಗಳ ಪ್ರವಾಸಿಗರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ವಿದೇಶಿ ಪ್ರವಾಸಿಗರಲ್ಲಿ ಮಧ್ಯಪ್ರಾಚ್ಯದ ʼಇಬನ್ ಬಟೂಟʼ, ಇಟಲಿಯ ʼನಿಕೊಲೊ-ಡಿ-ಕೊಂಟೆʼ, ರಷ್ಯಾದ ʼನಿಕಿಟಿನ್ʼ, ಲಿಸ್ಬನ್ನ ʼದು ಆರ್ತೆ ಬಾರ್ಬೊಸʼ, ಪೋರ್ಚುಗೀಸ್ ದೇಶದ ʼಡೊಮಿಂಗೊ ಪಯಸ್ʼ, ʼನ್ಯೂನಿಜ್ʼ ತಮ್ಮ ಅನುಭವಗಳನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ. ನಿಕೊಲೊ-ಡಿ-ಕೊಂಟೆ ವಿಜಯನಗರವನ್ನು ಬಿಜನೆಗಾಲಿಯಾ ಎಂದು ಉಚ್ಛರಿಸಿದ್ದಾನೆ (ಇಟಲಿಯವನಾದ ನಿಕೊಲೊ-ಡಿ-ಕೊಂಟೆ ಬಾಯಲ್ಲಿ ವಿಜಯನಗರ ಬಿಜಗನೆಲಿಯಾ ಆಗಿದೆ), ಅದರ ರಾಜ ಪರಿವಾರದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಾನೆ. ನವರಾತ್ರಿಯ ಬಗ್ಗೆ ಬರೆಯುತ್ತ “..ಇದೊಂದು ಒಂಬತ್ತು ದಿನಗಳ ಹಬ್ಬ. ಆಗ (ನವರಾತ್ರಿಯಲ್ಲಿ) ದೊಡ್ಡ ಬೀದಿಗಳಲ್ಲಿ ಹಡಗಿನ ಪಠಸ್ತಂಭದಂತಹ ಸ್ತಂಭಗಳನ್ನು ನೆಟ್ಟು ಬಹುಸುಂದರವಾದ ಜರತಾರಿ ಬಟ್ಟೆಯ ಚೂರುಗಳನ್ನು ಮೇಲುಗಡೆ ಸಿಕ್ಕಿಸುತ್ತಾರೆ. ಆ ಸ್ತಂಭದ ತುದಿಯಲ್ಲಿ ದಿನವೂ ದೇವರಲ್ಲಿ ಅಪಾರ ಭಕ್ತಿಯುಳ್ಳ ಮತ್ತು ಎಂತಹ ಕಷ್ಟವನ್ನಾದರೂ ಸ್ಥಿರ ಮನಸ್ಸಿನಿಂದ ಸಹಿಸಬಲ್ಲ ಒಬ್ಬನನ್ನು ಕುಳ್ಳಿರಿಸುತ್ತಾರೆ. ಇವನ ಕಡೆಗೆ ಕಿತ್ತಳೆ, ನಿಂಬೆ ಮುಂತಾದ ಹಣ್ಣುಗಳನ್ನು ಎಸೆಯುತ್ತಾರೆ.” ನಿಕೊಲೊವಿನ ಈ ಮಾತುಗಳು ಅಂದಿನ ನವರಾತ್ರಿ ಆಚರಣೆಯ ಒಂದು ನೋಟವನ್ನು ನೀಡುತ್ತದೆ. (‘ನಾಡಹಬ್ಬ ದಸರಾ’ ಎಂಬ ಕೃತಿಯಿಂದ ಉದ್ಧೃತ, ಪುಟ 89). 1520-22ರಲ್ಲಿ ಬಂದಿದ್ದ ಡೊಮಿಂಗೊ ಪಯಸ್ ಎಂಬ ಪ್ರವಾಸಿ ವಿಜಯನಗರವನ್ನು ಬಿಸಂಗದ ಎಂದು ಕರೆಯುತ್ತಾ ನವರಾತ್ರಿ ಹಬ್ಬದ ಆಚರಣೆ ಬಗ್ಗೆ ವಿವರ ನೀಡುತ್ತಾನೆ. ಹಬ್ಬದ ದಿನಗಳಲ್ಲಿ ಕುಸ್ತಿ ಪುಟುಗಳಿಂದ ಕುಸ್ತಿ, ಬಾಣಬಿರುಸುಗಳ ಆರ್ಭಟ, ಅಲಂಕೃತಗೊಂಡ ರಾಣಿ ವಾಸದವರ ಹಾವಭಾವ ಪ್ರದರ್ಶನವಾಗುತ್ತಿದ್ದಂತೆ ದೊರೆಯು ದೇವಿ ಆರಾಧನೆಗೆ ಹೋಗುತ್ತಾನೆ ‘ಅಲ್ಲಿಗೆ ಬಲಿಗಾಗಿ ಅನೇಕ ಎಮ್ಮೆ, ಕೋಣಗಳನ್ನೂ ಕುರಿಗಳನ್ನೂ ತರುತ್ತಾರೆ. ಅವುಗಳನ್ನು ಕೊಲ್ಲುತ್ತಾರೆ. ಬಳಿಕ ವೃತ್ತಿನಿರತ ನೃತ್ಯಗಾರ್ತಿಯರು (ಬಹುಶಃ ದೇವದಾಸಿಯರು) ಬಂದು ನೃತ್ಯ ಮುಂದುವರಿಸುತ್ತಾರೆ. ಆ ನಂತರ ದೊರೆ ರಾತ್ರಿಯ ಊಟಕ್ಕೆ ತೆರಳುತ್ತಾನೆ. ಇದು ಎಲ್ಲ ಒಂಬತ್ತು ದಿನಗಳಲ್ಲೂ ನಡೆಯುತ್ತದೆ…’ ಎಂಬುದಾಗಿ ಪಯಸ್ ತಾನು ಗ್ರಹಿಸಿದ್ದನ್ನು ಉಲ್ಲೇಖಿಸಿದ್ದಾನೆ.

ಮೈಸೂರು ಸಂಸ್ಥಾನದಲ್ಲಿ ದಸರಾ ಆಚರಣೆ ವಿಜಯನಗರದ ಅರಸರ ಸಾಂಪ್ರದಾಯಿಕ ಆಚರಣೆಗಳನ್ನೇ ಮೊದಲಿಗೆ ಯಥಾವತ್ತಾಗಿ ಆಚರಿಸಿಕೊಂಡು ಬಂದ ಮೈಸೂರ ಒಡೆಯರು ಕಾಲಾಂತರದಲ್ಲಿ ಪರಿಸ್ಥಿತಿಗೆ ತಕ್ಕನಾಗಿ ಕೆಲವು ಮಾರ್ಪಾಡುಗಳನ್ನೂ ಮಾಡಿಕೊಂಡಿದ್ದಾರೆ.

ಸುಮಾರು 1399-1423ರ ಹೊತ್ತಿಗೆ ಆಗಲೇ ದ್ವಾರಕೆಯಿಂದ ಇತ್ತ ಬಂದಿದ್ದ ಯುದುವಂಶದ ರಾಜರು ಮೈಸೂರಿನ ಆಗ್ನೇಯ ದಿಕ್ಕಿನಲ್ಲಿರುವ ಹದಿನಾಡು(ನಂಜನಗೂಡಿನ ಹದಿನಾರು) ಮತ್ತು ಕಾರುಗಹಳ್ಳಿಗಳ ಪಾಳೆಪಟ್ಟಿನ ಅಧಿಪತ್ಯ ಸಾಧಿಸಿಕೊಂಡಿರಬಹುದಾದ ಸಾಧ್ಯತೆಗಳಿವೆ.

ಮೈಸೂರಿನ ಎಲ್ಲಾ ಅರಸರ ಹೆಸರಿನ ಮುಂದೆ ಒಡೆಯರ್‌ ಎಂದು ಕುಲನಾಮ ಬಳಸಿರುವುದಕ್ಕೆ “ಸಂಸ್ಥಾನ ಸ್ಥಾಪನೆ”ಯ ಸಮಯದಲ್ಲಿ ಜಂಗಮನೊಬ್ಬ ಸಹಕರಿಸಿದನೆಂದೂ ಅವನ ಮೇಲಿನ ಗೌರವದಿಂದಾಗಿ ಅರಸರು ಈ ಕ್ರಮವನ್ನು ಬೆಳೆಸಿದರೆಂದು ಪ್ರತೀತಿ ಇದೆ. ಸು. 1553-72 ರಲ್ಲಿ ಎರಡನೆ ತಿಮ್ಮರಾಜ ಪಾಳೆಯಗಾರನನ್ನು ಗೆದ್ದು ʼಬಿರುದೆಂತೆಂಬರಗಂಡʼ ಎಂಬ ಬಿರುದನ್ನು ಪಡೆದುಕೊಂಡ, ನಂತರದಲ್ಲಿ ಆತನ ತಮ್ಮ ಬೋಳಚಾಮರಾಜನೆಂಬಾತ ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನನ್ನು ಸೋಲಿಸಿ ಅವನು ಬಳಸುತ್ತಿದ್ದ ʼಸುಗುಣ ಗಂಭೀರʼ ಎಂಬ ಬಿರುದನ್ನು ತಾನೆ ಧರಿಸಿದನಂತೆ. 1578ರ ಹೊತ್ತಿಗೆ ಕೇವಲ 33 ಹಳ್ಳಿಗಳನ್ನು ಮೈಸೂರು ಪಾಳೆಯಪಟ್ಟನ್ನು ದೊಡ್ಡ ರಾಜ್ಯವನ್ನಾಗಿಸಲು ಪ್ರಯತ್ನಿಸಿ ಜಯಿಸಿದವರು ರಾಜಾಒಡೆಯರ್.‌ ಒಡೆಯರ ವಂಶದ ಸ್ಪಷ್ಟ ಚಿತ್ರಣ ಸಿಗುವುದು ಇಲ್ಲಿನಿಂದ. ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ವಿಜಯನಗರದ ಅಧಿಕೃತ ಪ್ರತಿನಿಧಿಯಾಗಿದ್ದ ತಿರುಮಲರಾಯನಿಗೂ ವಿಜಯನಗರದ ಅಂದಿನ ಅರಸ ವೆಂಕಟನಿಗೂ ವೈಮನಸ್ಸಿದ್ದ ಕಾರಣ ರಾಜಾಒಡೆಯರ್‌ ತಿರುಮಲನನ್ನು ಅಲಕ್ಷಿಸಿ ಮೈಸೂರಿನ ಸುತ್ತ ಕೋಟೆ ನಿರ್ಮಿಸಿ ಸುತ್ತಲ್ಲಿನ ಪ್ರದೇಶಗಳನ್ನು ಗೆದ್ದುಕೊಂಡ. ನಂತರದಲ್ಲಿ ತಿರುಮಲನ ಮೇಲೆ ದಾಳಿ ಮಾಡಿ, ಶ್ರೀರಂಗಪಟ್ಟಣವನ್ನೂ ವಶಪಡಿಸಿಕೊಂಡು, ಅರಸು ವೆಂಕಟನ ಒಪ್ಪಿಗೆ ಪಡೆದುಕೊಂಡು ಆ ಭಾಗದ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾದ. ಆ ಸಮಯದಲ್ಲೇ ಶ್ರೀರಂಗಪಟ್ಟಣದಲ್ಲಿ ದೊರೆ ರಾಜಾ ಒಡೆಯರ್‌ ಮಹಾನವಮಿ ಆಚರಣೆಯನ್ನು ಮತ್ತೆ ಮುನ್ನೆಲೆಗೆ ತಂದರು. 1610ರಲ್ಲಿ ವಿಜಯದಶಮಿಯ ಮೆರವಣಿಗೆಯನ್ನು ಪುನಾರಂಭಿಸಿದರು. ಅಂದಿನಿಂದ (1610) ಒಂಭತ್ತನೇ ಅರಸನಾದ ಚಾಮರಾಜ ಒಡೆಯರ್‌ವರೆಗೂ ಥೇಟ್‌ ವಿಜಯನಗರದ ಶೈಲಿಯನ್ನೇ ಅನುಕರಿಸಿದ್ದ ಅರಸು, ಮಧ್ಯೆ ಕೆಲ ವರ್ಷಗಳ ಕಾಲ ಮುಸಲ್ಮಾನ ರಾಜ ಟಿಪ್ಪೂ ಸುಲ್ತಾನನ ಆಳ್ವಿಕೆಗೆ ಒಳಪಟ್ಟಿದ್ದ ಶ್ರೀ ರಂಗ ಪಟ್ಟಣದಲ್ಲಿ ವಿಜಯದಶಮಿಯ ಆಚರಣೆ ಸಾರ್ವಜನಿಕವಾಗಿ ನಡೆಯದೇ ನಿಂತುಹೋಗಿತ್ತು. ನಂತರದಲ್ಲಿ ಬ್ರಿಟೀಷರ ಅಧೀನಕ್ಕೆ ಒಳಪಟ್ಟ ಸಂಸ್ಥಾನವು, ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಅಂದರೆ 1799ರಲ್ಲಿ ತನ್ನ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿಕೊಂಡಿತು. ನಂತರದ ದಸರಾ ಆಚರಣೆಗಳನ್ನು ದಿಗ್ವಿಜಯಾರ್ಥವಾಗಿ ನಡೆಸುವ ಬದಲು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಆಚರಿಸಿದ್ದು ಗಮನಾರ್ಹ ಅಂಶವಾಗಿದೆ.

ನಂತರದ ದಿನಗಳಲ್ಲಿ ಪ್ರತಿ ವರ್ಷವೂ ಅರಸರಿಂದಲೇ ನಡೆದು ಬಂದ ದಸರೆಯು ರಾಜಾಶ್ರಯದಲ್ಲಿ ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್(1941-47) ಕ್ಕೆ ಕೊನೆಗೊಂಡಿತು. ಭಾರತ ದೇಶ ಸ್ವಾತಂತ್ರ್ಯಗೊಂಡು, ಭಾಷಾವಾರು ಪ್ರಾಂತ ವಿಂಗಡಣೆಯಾಗಿ, ಮೈಸೂರು ರಾಜ್ಯ ನಿರ್ಮಾಣವಾಗಿ ರಾಜ್ಯದ ಆಡಳಿತವನ್ನುಸರಕಾರದ ಮುಖ್ಯಮಂತ್ರಿಗಳಾದ ಚೆಂಗಲರಾಯರೆಡ್ಡಿಯವರಿಗೆ ಒಡೆಯರ್‌ ಅಧಿಕಾರವನ್ನು ಹಸ್ತಾಂತರಿಸಿ ತಾವು ಭಾರತ ಸರಕಾರದ ಪ್ರತಿನಿಧಿಯಾಗಿ ರಾಜ್ಯಪಾಲರಾಗಿ, ಪ್ರಮುಖರಾಗಿ ನಾನ ಹುದ್ದೆಗಳನ್ನು ಅಲಂಕರಿಸಿದ್ದು ಇತಿಹಾಸ. ಅಂದಿನಿಂದ ಶುರುವಾದ ಖಾಸಗಿ ದರ್ಬಾರ್‌ ಇಂದಿನವರೆಗೂ ನಡೆದುಕೊಂಡು ಬಂದಿದೆ.

ಚಾಮುಂಡಿದೇವಿ ಕೂರುವ ಅಂಬಾರಿಯ ಇತಿಹಾಸ

ಸು.15ನೇ ಶತಮಾನದಲ್ಲಿ ವಿಜಯದಶಮಿಯನ್ನು ಆರಂಭಿಸಿದ್ದ ವಿಜಯನಗರ ಅರಸರು ತಮ್ಮ ರಾಜಧಾನಿ ಹಂಪೆಯಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಈಗ ನಾವು ಕಾಣುವ ಅಂಬಾರಿ ಆಗಲೂ ಇದ್ದಿದ್ದು. ಈ ಅಂಬಾರಿಯ ಮೂಲ ಮಹಾರಾಷ್ಟ್ರದ ದೇವಗಿರಿ ಎನ್ನಲಾಗುತ್ತದೆ. ಶತ್ರುಗಳ ದಾಳಿಗೆ ನಲುಗಿದ್ದ ದೇವಗಿರಿ ನಾಶವಾಗುತ್ತದೆ. ಆಗ ಮುಮ್ಮಡಿ ಸಿಂಗನಾಯಕನೆಂಬ ದೊರೆಯು ಅದನ್ನು ಹೊತ್ತೊಯ್ದು ಬಳ್ಳಾರಿಯ ರಾಮದುರ್ಗ ಕೋಟೆಯಲ್ಲಿ ಅಡಗಿಸಿಡುತ್ತಾನೆ. ಬಳಿಕ ಈತನ ಮಗನಾದ ಕಂಪಿಲರಾಯನು ಒಂದು ಶಕ್ತಿಯುತ ಸಾಮ್ರಾಜ್ಯವನ್ನು ನಿರ್ಮಿಸಿದ ನಂತರ ಅಂಬಾರಿಯನ್ನು ಹೊರ ತಂದು ಅದರಲ್ಲಿ ದುರ್ಗಾದೇವಿಯ ಮೂರ್ತಿಯನ್ನಿಟ್ಟು ಪೂಜಿಸಲು ಆರಂಭಿಸಿದ. ಕಂಪಿಲರಾಯನ ಮಗನಾದ ಗಂಡುಗಲಿ ಕುಮಾರರಾಮನ ಕಾಲದಲ್ಲಿ ತನ್ನ ರಾಜ್ಯ ಕಂಪ್ಲಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿದ್ದ. ಸುಮಾರು 1327ರ ಹೊತ್ತಿಗೆ ದೆಹಲಿ ಸುಲ್ತಾನರ ದಾಳಿಯಿಂದಾಗಿ ಮರಣಹೊಂದಿದ ಕುಮಾರರಾಮನು ಕಂಪಿಲಿ ರಾಜ್ಯದ ಕೊನೆಯ ರಾಜನಾಗಿದ್ದಾನೆ. ಆ ಸಮಯಕ್ಕಾಗಲೆ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯ ನಿರ್ಮಾಣಕ್ಕೆ ತೊಡಗಿದ್ದ ಹಕ್ಕ-ಬುಕ್ಕರು ಈ ಅಂಬಾರಿಯನ್ನು ಸಂರಕ್ಷಿಸುತ್ತಾರೆ. ನಂತರದಲ್ಲಿ ಹಂಪಿಯನ್ನು ರಾಜಧಾನಿಯನ್ನಾಗಿಸಿದಾಗ ಅಲ್ಲಿಗೆ ಬುಕ್ಕ ಅರಸನು ಅಂಬಾರಿಯನ್ನು ತಂದು ಮಹಾನವಮಿಯಂದು ಮೆರವಣಿಗೆ ಆರಂಭಿಸಿದನು.

ಸುವರ್ಣಯುಗದ, ಎರಡನೇ ದೇವರಾಯನ ಕಾಲದಲ್ಲಿ ಬರ್ಮಾವನ್ನೂ ವಶಪಡಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡ, ಶ್ರೀಕೃಷ್ಣದೇವರಾಯನಂತ ಶ್ರೇಷ್ಟ ಅರಸನಿದ್ದ ವಿಜಯನಗರ ಸಾಮ್ರಾಜ್ಯವು ಪತನಗೊಂಡ ಸಮಯಕ್ಕೆ ಅತ್ತ ಮೈಸೂರು ಸಂಸ್ಥಾನ ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿಸಿಕೊಂಡು ತಲೆಯೆತ್ತುತಲಿತ್ತು. ಆಗ ಅಂಬಾರಿಯನ್ನು ಕಾಪಾಡಲು ಮೊದಲು ಪೆನುಕೊಂಡಕ್ಕೆ ಸಾಗಿಸಲಾಯಿತು. ಬಳಿಕ ಅಂಬಾರಿಯನ್ನು ಕಾಪಾಡುವ ಹೊಣೆ ಶ್ರೀರಂಗಪಟ್ಟಣದ ಒಡೆಯರ ಹೆಗಲಿಗೆ ಬಂದಿತು. ಸುಮಾರು 800 ವರ್ಷಗಳ ಇತಿಹಾಸವುಳ್ಳ ಅಂಬಾರಿಯು ಕಳೆದ 409 ವರ್ಷಗಳಿಂದ ಮೈಸೂರು ಅರಸರ ಸುಪರ್ದಿಯಲ್ಲಿದ್ದು, ಈಗ ಕರ್ನಾಟಕ ಸರಕಾರದ ರಕ್ಷಣೆಯಲ್ಲಿದ್ದು ನಾಡ ಹಬ್ಬ ದಸರೆಯ ದಿವಸ ರಾಜಬೀದಿಯಲ್ಲಿ ಠೀವಿಯಿಂದ ಮೆರವಣಿಗೆಯಲ್ಲಿ ಸಾಗುತ್ತ ಭಕ್ತಾದಿಗಳ ಮನಸೋರೆಗೊಳಿಸುತ್ತ, ಭಕ್ತಿಭಾವದಿಂದ ತುಂಬಿಕೊಂಡಿದೆ. ದಸರಾ ಹಬ್ಬದ ಕಡೆಯ ದಿವಸವಾದ ವಿಜಯದಶಮಿಯಂದು ಹೊರಡುವ ಜಂಬೂ ಸವಾರಿಯು ಅರಮನೆಯಲ್ಲಿ ಸಾಂಪ್ರದಾಯಿಕ ವಿಧಿವಿದಾನಗಳನ್ನು ಪೂರ್ಣಗೊಳಿಸಿ ಅರಮನೆಯ ಆವರಣದಲ್ಲಿ ಮೊದಲ್ಗೊಳ್ಳುತ್ತದೆ. ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಸಾಗುವ ಅಂಬಾರಿಯ ಮೆರವಣಿಗೆ ಬನ್ನಿ ಮಂಟಪವನ್ನು ತಲುಪುವವರೆಗೂ ನೋಡುಗರನ್ನು ರೋಮಾಂಚನಗೊಳಿಸುತ್ತದೆ.

ಜಂಬೂಸವಾರಿ ಎಂಬ ಆಕರ್ಷಣೆ
ವಿಶ್ವವಿಖ್ಯಾತ ದಸರಾ ಕೇಂದ್ರಬಿಂದು ಎಂದರೆ ಅದು ಜಂಬೂಸವಾರಿ. ದಸರಾ ಆನೆಗಳನ್ನು ಸಿಂಗರಿಸಿ, ಅಲಂಕರಿಸಿದ ಚಿನ್ನದಂಬಾರಿಯನ್ನು ಗಜಪಡೆಯ ಕ್ಯಾಪ್ಟನ್ ಮೇಲೆ ಹೊರಿಸಲಾಗುತ್ತದೆ. ಅಂಬಾರಿಯಲ್ಲಿ ಅಲಂಕಾರಭೂಷಿತಳಾಗಿ ದೇವಿ ಚಾಮುಂಡೇಶ್ವರಿ ವಿರಾಜಮಾನಳಾಗುತ್ತಾಳೆ. ಚಿನ್ನದಂಬಾರಿ ಹೊತ್ತ ಗಜಪಡೆ ಸಾಲಾಗಿ ಅರಮನೆಯಿಂದ ಬನ್ನಿಮಂಪಟದ ವರೆಗೆ ಸಾಗುವ ಮೆರವಣಿಗೆ ಸಾಗುತ್ತದೆ. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಾದೇಶಿಕ ಪರಂಪರೆಯನ್ನು ಬಿಂಬಿಸುವ ಸ್ತಬ್ದಚಿತ್ರಗಳು ಇರುತ್ತವೆ. ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಜನ ಹಿಂದಿನ ದಿನವೇ ಬಂದು ಮೆರವಣಿಗೆ ಮಾರ್ಗದುದ್ದಕ್ಕೂ ಕಾದು ಕುಳಿತಿರುತ್ತಾರೆ. ಬಿಸಿಲು, ಮಳೆಯನ್ನೂ ಲೆಕ್ಕಿಸದೇ ಮೆರವಣಿಗೆ ವೀಕ್ಷಿಸುತ್ತಾರೆ.

ಹಕ್ಕ-ಬುಕ್ಕ ಸಹೋದರರು ಅಂಬಾರಿಯ ಬಚ್ಚಿಟ್ಟು, ದೆಹಲಿ ಸುಲ್ತಾನರ ದಾಳಿಯಿಂದ ಅದನ್ನು ರಕ್ಷಿಸಿದ್ದು ಹೇಗೆ?

ಅಂಬಾರಿಯ ಇತಿಹಾಸ ಬಲು ರೋಚಕವಾಗಿದೆ. ಮೂಲತಃ ಈ ರತ್ನಖಚಿತ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಲ್ಲಿ ಇತ್ತು. ಕಾಲಾಂತರದಲ್ಲಿ ದೇವಗಿರಿ ಅವನತಿ ಹೊಂದಿದಾಗ, ಅಂಬಾರಿಯನ್ನು ದೇವಗಿರಿಯ ರಾಜ ಮುಮ್ಮಡಿಸಿಂಗ ನಾಯಕನಿಗೆ ಹಸ್ತಾಂತರಿಸಿ, ಆತನಿಗೆ ಅದನ್ನು ಸುರಕ್ಷಿತವಾಗಿಡುವಂತೆ ಮನವಿ ಮಾಡಿಕೊಂಡರು. ಆಗ ಮುಮ್ಮಡಿ ಸಿಂಗ ನಾಯಕನು ಇದನ್ನು ಬಳ್ಳಾರಿ ಹತ್ತಿರವಿದ್ದ ರಾಮದುರ್ಗ ಕೋಟೆಯಲ್ಲಿ ಅಡಗಿಸಿ ಇಟ್ಟನು. ನಂತರ ಈತನ ಮಗ ಕಂಪಿಲರಾಯ ತನ್ನ ರಾಜ್ಯ ವಿಸ್ತರಣೆ ಮಾಡಿ, ಕಮ್ಮಟ ದುರ್ಗವನ್ನು ತನ್ನ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿ ಶ್ರೀದುರ್ಗಾದೇವಿಯನ್ನು ಸ್ಥಾಪಿಸಿ ಆರಾಧನೆ ಮಾಡುತ್ತಾನೆ.

ಆದರೆ ಮುಂದೆ ದೆಹಲಿ ಸುಲ್ತಾನರು ಕಂಪಿಲರಾಜ್ಯದ ಮೇಲೆ ದಾಳಿ ಮಾಡಿದಾಗ, ಅಲ್ಲಿ ಭಂಡಾರ ಸಂರಕ್ಷಕರಾದ ಹಕ್ಕ-ಬುಕ್ಕರೆಂಬ ಸಹೋದರರು (Hakka Bukka brothers) ಈ ಅಂಬಾರಿಯನ್ನು ಬಚ್ಚಿಡುತ್ತಾರೆ. ಮುಂದೆ ದೆಹಲಿ ಸುಲ್ತಾನದ ಅವನತಿಯ ನಂತರ ಈ ಸಹೋದರರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅನಂತರ ಹಂಪೆ ಅವರ ಸಾಮ್ರಾಜ್ಯದ ಎರಡನೇ ರಾಜಧಾನಿಯಾದಾಗ ಅಂಬಾರಿ ಹಂಪಿಗೆ ಬಂದು ಸೇರುತ್ತದೆ. ವಿಜಯನಗರ ಸಾಮ್ರಾಜ್ಯ ಅವನತಿಯ ಕಾಲದಲ್ಲಿ ಅಂಬಾರಿಯನ್ನುರಕ್ಷಿಸಲು ಅದನ್ನು ಪೆನುಗೊಂಡಕ್ಕೆ ಸ್ಥಳಾಂತರ ಮಾಡುತ್ತಾರೆ. ಮುಂದೆ ಅದು ಅಲ್ಲಿಂದ ಶ್ರೀರಂಗಪಟ್ಟಣ್ಣವನ್ನು ಸೇರಿ ಕಡೆಗೆ ಒಡೆಯರ ಅಧೀನದಲ್ಲಿ ಮೈಸೂರನ್ನು ಸೇರುತ್ತದೆ.

ಹೀಗೆ ಅಂಬಾರಿ ವಿವಿಧ ಅರಸರ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಕಡೆಗೆ ಮೈಸೂರಲ್ಲಿ ನೆಲೆಗೊಂಡಿದೆ. ಇಂದಿಗೂ ಮೈಸೂರು ದಸರಾ ಸಂದರ್ಭದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಪುನೀತವಾಗಿದೆ.ಮೈಸೂರು ರಾಜರೇ ಸಿಂಹಾಸನದ ಮೇಲೆ ಕುಳಿತು ದರ್ಬಾರ್ ನಡೆಸುತ್ತಿದ್ದರು, ಅಂಬಾರಿಯ ಮೇಲೆ ಕುಳಿತು ಮೆರವಣಿಗೆ ಹೋಗುತ್ತಿದ್ದರು.

ಸ್ವಾತಂತ್ರ್ಯ ಬಂದ ಬಳಿಕವೂ ಈ ಸಂಪ್ರದಾಯ ಹೀಗೆಯೇ ಮುಂದುವರೆದಿತ್ತು. ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್(Chamaraja Wodeyar) ಅವರೇ ಅಂಬಾರಿಯ ಮೇಲೆ ಕುಳಿತು ಬನ್ನಿ ಮಂಟಪದವರೆಗೆ ಮೆರವಣಿಗೆ ಹೋಗುತ್ತಿದ್ದರು.ಆದರೆ, 1969ರ ಬಳಿಕ ಅವರು ಅಂಬಾರಿಯ ಬದಲು ತಮ್ಮ ಸ್ವಂತ ಕಾರಿನಲ್ಲಿ ಬನ್ನಿ ಮಂಟಪಕ್ಕೆ ಬರುತ್ತಾರೆ.

ಅಂಬಾರಿಯ ಮೇಲೆ ಮೆರವಣಿಗೆ ಮಾಡಿದ ಕೊನೆಯ ಮೈಸೂರು ಮಹಾರಾಜ ಯಾರು ಗೊತ್ತಾ?

ಹೌದು, ಸ್ವಾತಂತ್ರ್ಯ ಬಂದು 22 ವರ್ಷಗಳ ಕಾಲವೂ ಮೈಸೂರು ಅರಸರೇ ದಸರಾ ಆಚರಿಸುತ್ತಿದ್ದರು. ಆದರೆ 1969ರಲ್ಲಿ ಬಂದಂತಹ ಒಂದೇ ಒಂದು ಕಾನೂನು, ದಸರಾ ಹಬ್ಬದ ಮೇಲೆ ಕಾರ್ಮೋಡವೇ ಕವಿಯುವಂತೆ ಮಾಡಿಬಿಡುತ್ತದೆ. ಮೈಸೂರಿನ ಜನತೆಗೆ ಅಘಾತವನ್ನೇ ಉಂಟು ಮಾಡಿಬಿಡುತ್ತದೆ. ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡುತ್ತಿದ್ದ ಮಹಾರಾಜರು ದಸರಾ ಆಚರಣೆಯನ್ನೇ ಮೊಟಕುಗೊಳಿಸುತ್ತಾರೆ, ಆನೆಯ ಅಂಬಾರಿ ಮೇಲೆ ಕುಳಿತು ಮೆರವಣಿಗೆ ಹೋಗುವುದನ್ನೇ ನಿಲ್ಲಿಸುತ್ತಾರೆ. ಇದಕ್ಕೆ ಕಾರಣವೂ ಇದೆ.

1969 ಡಿಸೆಂಬರ್ನಲ್ಲಿ ಇಂದಿರಾ ಗಾಂಧಿಯವರು(Indira Gandhi) ದೇಶದಲ್ಲಿ ರಾಜಧನ ರದ್ದು ಕಾನೂನು ಜಾರಿಗೆ ತರುತ್ತಾರೆ. ಆ ಕಾನೂನಿನ ಪ್ರಕಾರ, ಮಹಾರಾಜ ಜಯಚಾಮರಾಜ ಒಡೆಯರ್ ಅವರು ಕೂಡ ಸಾಮಾನ್ಯ ನಾಗರಿಕರಾಗುತ್ತಾರೆ. ಆ ಕ್ಷಣದಿಂದಲೇ ಭಾರತದಲ್ಲಿ ‘ರಾಜ’ ಎನ್ನುವ ಹುದ್ದೆ ರದ್ದುಗೊಳ್ಳುತ್ತದೆ. ಇದರ ನಂತರ 1970ರ ಅಕ್ಟೋಬರ್ ತಿಂಗಳಿನಲ್ಲಿ ಮೈಸೂರಿನಲ್ಲಿ ಮತ್ತೆ ದಸರಾ ಕಳೆ.ಆದರೆ ಈ ಬಾರಿ ಜಯಚಾಮರಾಜ ಒಡೆಯರ್ ಅವರು ದರ್ಬಾರ್ ಹಾಲ್ನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದರು.

ಅದರ ಬದಲು ತಮ್ಮ ಪಟ್ಟದ ಕತ್ತಿಯನ್ನೇ ಸಿಂಹಾಸನದ ಮೇಲಿಟ್ಟು ಪೂಜಿಸುತ್ತಾರೆ. ಅಂಬಾರಿಯ ಮೇಲೆ ಕುಳಿತುಕೊಳ್ಳದೇ, ಕಾರಿನಲ್ಲಿ ಬನ್ನಿ ಮಂಟಪಕ್ಕೆ ಹೋಗಿ ಪೂಜೆ ಮಾಡಲು ನಿರ್ಧರಿಸುತ್ತಾರೆ.ಆದರೆ, ಇದರಿಂದ ಮೈಸೂರಿನ ಜನತೆ ದಿಗ್ಭ್ರಮೆಗೊಳ್ಳುತ್ತಾರೆ. ಏಕೆಂದರೆ, ಅವರು ಎಂತಹ ಪರಿಸ್ಥಿತಿಯಲ್ಲಿಯೂ ದಸರಾ ಹಬ್ಬವನ್ನ ನಿಲ್ಲಿಸಿರಲಿಲ್ಲ. ಹಾಗಾಗಿ, ಮಹಾರಾಜರ ಆಪ್ತ, ಅಭಿಮಾನಿ ಹಾಗೂ ಕನ್ನಡ ಹೋರಾಟಗಾರರಾಗಿದ್ದ ನಾಗಲಿಂಗ ಸ್ವಾಮಿ ಎಂಬುವರು ತಾವೇ ಮುಂದೆ ನಿಂತು ದಸರಾ ಹಬ್ಬದ ಆಚರಣೆಗೆ ಸಿದ್ಧತೆ ನಡೆಸುತ್ತಾರೆ.

ರಾಜರಿಲ್ಲದ ಆ ವರ್ಷ ಮೈಸೂರಿನ ಪ್ರಜ್ಞಾವಂತ ನಾಗರಿಕರೇ ದಸರಾ ಆಚರಿಸುತ್ತಾರೆ. ಮೈಸೂರಿನ ಕನ್ನಡ ಹೋರಾಟಗಾರರು, ಯುವಕರು ಸೇರಿಕೊಂಡು ದಸರಾ ಉತ್ಸವಕ್ಕೆ ಸಿದ್ಧತೆ ನಡೆಸಿದ್ದರು. ಜಂಬೂ ಸವಾರಿಗೆ(Jamboo Savari) ಬೇಕಾದ ಆನೆ, ಅಂಬಾರಿ ಎಲ್ಲವನ್ನೂ ಸಿದ್ಧಗೊಳಿಸಿದ್ದರು, ಆದರೆ ಅಂಬಾರಿಯ ಮೇಲೆ ಯಾರು ಕುಳಿತುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಇರಲಿಲ್ಲ. ಆಗ ನಾಗಲಿಂಗಸ್ವಾಮಿಯವರ ನೇತೃತ್ವದಲ್ಲಿ ಹೋರಾಟಗಾರರೆಲ್ಲಾ ಸಭೆ ನಡೆಸುತ್ತಾರೆ. ಚರ್ಚೆಯ ಬಳಿಕ ಅಲ್ಲಿ ತಾಯಿ ಭುವನೇಶ್ವರಿಯ ಫೋಟೋವನ್ನಿಟ್ಟು ಮೆರವಣಿಗೆ ನಡೆಸಲು ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.ಹೀಗೆ, ಎರಡು ವರ್ಷಗಳ ಕಾಲ ಜನರೇ ಸೇರಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಿದ್ದರು. ನಂತರ, 1972ರಲ್ಲಿ ಮೈಸೂರಿನವರೇ ಆದಂತಹ ದೇವರಾಜ ಅರಸು ಅವರು ನಾಡಿನ ಮುಖ್ಯಮಂತ್ರಿಯಾಗಿದ್ದರು. ಇವರು 1972ರಲ್ಲಿ ದಸರಾ ಹಬ್ಬವನ್ನ ಅಧಿಕೃತವಾಗಿ ನಾಡಹಬ್ಬ ಎಂದು ಘೋಷಿಸುತ್ತಾರೆ. ತಾಯಿ ಚಾಮುಂಡೇಶ್ವರಿಯನ್ನ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಂಪ್ರದಾಯವನ್ನ ಆರಂಭಿಸುತ್ತಾರೆ.ಅಂದಿನಿಂದ ಇಂದಿನವರೆಗೂ ನಾಡಹಬ್ಬ ದಸರಾ ಯಾವುದೇ ಗೊಂದಲಗಳಿಲ್ಲದೇ ನಡೆದುಕೊಂಡು ಬಂದಿದೆ. ಮಹಾರಾಜರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸುವ ಮೂಲಕ ಪರಂಪರೆಯನ್ನ ಮುಂದುವರೆಸಿದ್ದಾರೆ. ಹೀಗೆ, ಪ್ರತೀ ವರ್ಷವೂ ಮೈಸೂರು ದಸರಾ ತನ್ನ ವೈಭವವನ್ನ ಜಗತ್ತಿಗೆ ಸಾರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular