ಮಂಗಳೂರು : ಫೀನಿಕ್ಸ್ ಫಿಲ್ಮ್ಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ ಮಹೇಂದ್ರ ಕುಮಾರ್ ನಿರ್ಮಾಣದ ಹಾಗೂ ಗೌರಿ ಶ್ರೀನಿವಾಸರವರ ನಿರ್ದೇಶನದ “ದಿ ಜರ್ನಿ ಆಫ್ ಬೆಳ್ಳಿ’ ಮಕ್ಕಳ ಚಲನಚಿತತ್ರ ಶುಕ್ರವಾರ ಬೆಳಗ್ಗೆ ನಗರದ ಭಾರತ್ ಮಾಲ್ ನಲ್ಲಿರುವ ಬಿಗ್ ಸಿನೆಮಾಸ್ ನಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಮಾತಾಡಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು, “ಇಡೀ ಚಿತ್ರತಂಡಕ್ಕೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಕುಟುಂಬ ಸಮೇತರಾಗಿ ಕೂತು ನೋಡುವಂತಹ ಸಿನಿಮಾ ಇದಾಗಿದ್ದು ಎಲ್ಲರೂ ಸಿನಿಮಾ ನೋಡಿ ಆನಂದಿಸಿ” ಎಂದರು.
ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಅವರು, “ಕಳೆದ ಹಲವಾರು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಅಭಿರುಚಿಯ ಸಿನಿಮಾಗಳು ಬರುತ್ತಿವೆ. ಅವುಗಳ ಮೂಲ ನಮ್ಮ ಕರಾವಳಿ ಆಗಿರುವುದು ಖುಷಿಯ ವಿಚಾರ. ಮಿತ್ರ ಮಹೇಂದ್ರ ಕುಮಾರ್ ಅವರ ಈ ಸಾಹಸ ಕಾರ್ಯಕ್ಕೆ ಬೆಂಬಲ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಸಿನಿಮಾದಲ್ಲಿ ಯೋಧ ಮತ್ತು ಆತನ ಮಗಳ ಸೆಂಟಿಮೆಂಟ್ ಇದ್ದು ಈ ಸಿನಿಮಾ ಎಲ್ಲೆಡೆ ಹೆಸರು ಮಾಡಲಿ“ ಎಂದರು.
ಬಳಿಕ ಮಾತಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, “ಉದ್ಯಮಿಯಾಗಿದ್ದು ಸದಭಿರುಚಿಯ ಸಿನಿಮಾವನ್ನು ಮಿತ್ರ ಮಹೇಂದ್ರ ಕುಮಾರ್ ಕನ್ನಡ ಚಿತ್ರಪ್ರೇಮಿಗಳಿಗೆ ನೀಡಿದ್ದಾರೆ ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ದೇಶದ ಗಡಿ ಕಾಯುವ ಯೋಧ ಮತ್ತು ಆತನ ಮಗಳು, ಇಡೀ ಕುಟುಂಬದ ಕಷ್ಟ ಏನೆನ್ನುವುದನ್ನು ಸಿನಿಮಾ ಪ್ರತಿಬಿಂಬಿಸುತ್ತದೆ. ಈಗಾಗಲೇ ರಾಷ್ಟ್ರಮಟ್ಟದ 10 ಅವಾರ್ಡ್ ಗಳನ್ನು ಸಿನಿಮಾ ಪಡೆದಿರುವುದು ಸಂತಸದ ವಿಚಾರ. ಈ ಸಿನಿಮಾವನ್ನು ಜನರು ವೀಕ್ಷಿಸುವ ಮೂಲಕ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿ. ಸರಕಾರಗಳು ಸಿನಿಮಾಕ್ಕೆ ಹೆಚ್ಚಿನ ಸಬ್ಸಿಡಿ ನೀಡುವ ಮೂಲಕ ಬೆಂಬಲಿಸಲಿ. ಸಿನಿಮಾ ಯಶಸ್ಸು ಕಾಣಲಿ“ ಎಂದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತಾಡಿ, ”ದಿ ಜರ್ನಿ ಆಫ್ ಬೆಳ್ಳಿ ಸಿನಿಮಾ ಬಿಡುಗಡೆಗೆ ಮುನ್ನವೇ ಹತ್ತಾರು ಪ್ರಶಸ್ತಿಗಳನ್ನು ಪಡೆದಿರುವುದು ಶ್ಲಾಘನೀಯ ವಿಚಾರ. ಸಿನಿಮಾದಲ್ಲಿ ದೇಶದ ಯೋಧನ ಕಥೆ ಇದ್ದು ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತಾಡಿ, ”ಮಹೇಂದ್ರ ಕುಮಾರ್ ಕಾಲೇಜು ಜೀವನದಲ್ಲೇ ಕಲೆ, ಸಾಹಿತ್ಯ ಅಭಿರುಚಿ ಹೊಂದಿದವರು. ಅವರ ಮೂಲಕ ಇನ್ನಷ್ಟು ಸಿನಿಮಾಗಳು ಬರಲಿ“ ಎಂದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ರಾಜ್ ಗೋಪಾಲ್ ರೈ, ಕಬಡ್ಡಿ ಅಸೋಷಿಯೇಷನ್ ಅಧ್ಯಕ್ಷ ಅಮರ್ ನಾಥ್ ರೈ, ಇಸ್ಮಾಯಿಲ್ ಮೂಡುಶೆಡ್ಡೆ, ನವೀನ್ ಬೋಂದೆಲ್, ಸಚಿನ್ ರೈ, ಧನುಷ್ ರೈ, ಭಾರತ್ ಸಿನಿಮಾಸ್ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಿನಿಮಾ ಕುರಿತು:
ಈ ಹಿಂದೆ “ಕಾರ್ನಿಕೊದ ಕಲ್ಲುರ್ಟಿ’ ಎಂಬ ಚಾರಿತ್ರಿಕ ತುಳು ಸಿನೆಮಾವನ್ನು ಮಹೇಂದ್ರ ಕುಮಾರ್ ನಿರ್ಮಾಣ ಮಾಡಿ ಯಶಸ್ವಿಯಾಗಿದ್ದು, ಇದು ಅವರ ಎರಡನೇ ಚಿತ್ರವಾಗಿದೆ. 9 ವರ್ಷದ ಹುಡುಗಿ ಬೆಳ್ಳಿ, ಭಾರತೀಯ ಸೇನೆಯಲ್ಲಿ ಗಡಿಪ್ರದೇಶದಲ್ಲಿ ಕರ್ತವ್ಯನಿರತನಾಗಿರುವ ತನ್ನ ತಂದೆಯ ಬರವಿಗಾಗಿ ಕಾಯುತ್ತಿರುವ ಕಥೆ, ಕ್ರಮೇಣ ಬೆಳ್ಳಿಯ ಬದುಕಿನಲ್ಲಿ ನಡೆದ ಘಟನೆಗಳಿಂದಾಗಿ ಅವಳ ಸ್ವಭಾವ ಕೋಪ ಮತ್ತು ದ್ವೇಷಕ್ಕೆ ತಿರುಗುತ್ತದೆ. ತಂದೆ ಹತ್ತಿರವಿಲ್ಲದ ಕಾರಣಕ್ಕಾಗಿ ಅವಳ ಬದುಕಿನಲ್ಲಿ ಹಲವು ಘಟನೆ, ಹೋರಾಟಗಳು ಸಂಭವಿಸುತ್ತವೆ. ಮುಂದೆ ಒಂದು ಸಂದರ್ಭದಲ್ಲಿ ಅವಳ ತಂದೆ ಮನೆಯವರನ್ನು ನೋಡಲು ಬಂದರೂ ಬೆಳ್ಳಿ ಕೋಪ ಹಾಗೂ ನಿರ್ಲಕ್ಷ್ಯ ತೋರಿಸುತ್ತಾಳೆ. ಮುಂದೆ ಈ ಕಥೆಗೆ ಬಂದ ಒಂದು ತಿರುವು ಮತ್ತು ಕೂಡಿಬಂದ ಕೆಲವು ಸಂದರ್ಭಗಳು ಹೊಸ ಕನಸೊಂದರ ಆವಿಷ್ಕಾರಕ್ಕೆ ನಾಂದಿಯಾಗುತ್ತದೆ.
ಈ ಚಲನಚಿತ್ರವು ಮೊಖೋ, ಕ್ರೌನ್ ವುಡ್, ಇಂಡೋ ಫ್ರೆಂಚ್, ತ್ರಿಲೋಕ, ಜ್ಯೂರಿ ಬಿರ್ಸಮುಂಡಾ, ರೋಶನಿ ಮುಂತಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ಮಾಪಕ, ನಿರ್ದೇಶಕ, ಉತ್ತಮ ಮಕ್ಕಳ ಚಲನಚಿತ್ರ, ವಿನ್ನರ್, ಜ್ಯೂರಿ ಪ್ರಶಸ್ತಿಗಳನ್ನು ಪಡೆದಿದೆ.