Thursday, July 23, 2026
Homeಕ್ರೈಂಮಂಗಳೂರು: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರು ಸಿಸಿಬಿ ಬಲೆಗೆ ..!

ಮಂಗಳೂರು: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರು ಸಿಸಿಬಿ ಬಲೆಗೆ ..!

ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಮಹತ್ವದ ಬಲೆ ಬಿಸಿದ್ದು ಕೇರಳದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಅಂತಾರಾಜ್ಯ ನಕಲಿ ನೋಟು ದಂಧೆಯನ್ನು ಭೇದಿಸಿದ್ದಾರೆ. ಮಂಗಳೂರಿನ ಕ್ಲಾಕ್ ಟವರ್ ಪ್ರದೇಶದಲ್ಲಿ 500 ರೂಪಾಯಿ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಕಾಸರಗೋಡು ಜಿಲ್ಲೆಯವರಾದ ಆರೋಪಿಗಳು ಕಾಸರಗೋಡಿನಲ್ಲಿ ಈ ನಕಲಿ ನೋಟುಗಳನ್ನು ಮುದ್ರಿಸಿ ನಗರದಲ್ಲಿ ಚಲಾವಣೆ ಮಾಡಲು ಯತ್ನಿಸುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ತಂಡ ಗಡಿಯಾರ ಕಂಬದ ಬಳಿಯ ಲಾಡ್ಜ್ ಮೇಲೆ ದಾಳಿ ನಡೆಸಿ 2,13,500 ರೂ.ಮೌಲ್ಯದ ನಕಲಿ 500 ನೋಟುಗಳು, ನಾಲ್ಕು ಮೊಬೈಲ್ ಫೋನ್ ಗಳನ್ನು ಹೊಂದಿದ್ದ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಕರಿಚೇರಿಯ ವಿ ಪ್ರಿಯೇಶ್, ಕಲ್ಲುಕಂಡಂ ಹೌಸ್‌ನ ವಿನೋದ್ ಕುಮಾರ್ ಕೆ, ಶಿಫಾನ್ ಮಂಜಿಲ್‌ನ ಅಬ್ದುಲ್ ಖಾದರ್ ಎಸ್‌ಎ ಮತ್ತು ಬೇಳೂರು ಕಟ್ಟೆಯ ಅಯೂಬ್ ಖಾನ್ ಬಂಧಿತ ವ್ಯಕ್ತಿಗಳು.

ಕಾಸರಗೋಡಿನ ಚರಕ್ಕಲ್‌ನಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿರುವ ಪ್ರಿಯೇಶ್ ಈ ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಎಂದು ಗುರುತಿಸಲಾಗಿದೆ. ಶೀಘ್ರ ಹಣ ಗಳಿಸುವ ಉದ್ದೇಶದಿಂದ ಕೋಝಿಕ್ಕೋಡ್ ಮತ್ತು ದೆಹಲಿಯಿಂದ ಕಚ್ಚಾ ಸಾಮಗ್ರಿಗಳನ್ನು ತರಿಸಿಕೊಂಡು ಯೂಟ್ಯೂಬ್ ಮೂಲಕ ನಕಲಿ ನೋಟುಗಳನ್ನು ಮುದ್ರಿಸುವ ತಂತ್ರವನ್ನುಕಲಿತಿದ್ದಾರೆ . ಈ ಗ್ಯಾಂಗ್ ಮಂಗಳೂರಿನಲ್ಲಿ ನಕಲಿ ನೋಟು ಚಲಾವಣೆ ಮಾಡಲು ಮುಂದಾಗಿತ್ತು.

ದಂಧೆಯಲ್ಲಿ ಭಾಗಿಯಾಗಿರುವ ಇತರ ಸದಸ್ಯರನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ 2,13,500 ರೂಪಾಯಿ ಮೌಲ್ಯದ 500 ರೂಪಾಯಿ ನಕಲಿ ನೋಟುಗಳು, 9,030 ರೂಪಾಯಿ ನಗದು, 30,000 ರೂಪಾಯಿ ಮೌಲ್ಯದ ಪ್ರಸಿದ್ಧ ಬ್ರಾಂಡ್‌ನ ಎರಡು ಕಪ್ಪು ಮೊಬೈಲ್ ಫೋನ್‌ಗಳು, 1,000 ರೂಪಾಯಿ ಮೌಲ್ಯದ ನೀಲಿ ಮೊಬೈಲ್ ಫೋನ್ ಮತ್ತು ಒಂದು ಕಪ್ಪು ಮೊಬೈಲ್ ಫೋನ್ ಗಳನ್ನೂ ವಶಪಡಿಸಲಾಗಿದೆ.

ಸಿಸಿಬಿ ಎಸಿಪಿ ಗೀತಾ ಡಿ ಕುಲಕರ್ಣಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಶ್ಯಾಮ್ ಸುಂದರ್ ಎಚ್ ಎಂ, ಸಿಸಿಬಿ ಪಿಎಸ್‌ಐಗಳಾದ ನರೇಂದ್ರ, ಸುದೀಪ್, ಎಎಸ್‌ಐ ಮೋಹನ್ ಕೆ ವಿ, ರಾಮ್ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ, ಸಿಸಿಬಿ ಘಟಕದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular