ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಸ್ತಾ ಇರುವ ಟೈಗರ್ ಅಪರೇಷನ್ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಪಾಲಿಕೆಯಿಂದ ನಿರಂತರವಾಗಿ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಜೆಸಿಬಿ ಬಳಸಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈಗಾಗಲೇ ಹಲವು ಗಾಡಿಗಳನ್ನು ದ್ವಂಸ ಮಾಡಲಾಗಿದೆ.ಹೀಗಾಗಿ ಇಂದು ಸ್ಟೇಟ್ ಬ್ಯಾಂಕ್ನಲ್ಲಿ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ.
ಸ್ಟೇಟ್ ಬ್ಯಾಂಕ್ ಬಳಿಯ ಫುಟ್ಪಾತ್ನಲ್ಲಿ ಇಂದು ಪಾಲಿಕೆ ಕಾರ್ಯಾಚರಣೆ ನಡೆಸಿದ್ದು ಇದರ ವಿರುದ್ದ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಬಳಿಯಲ್ಲಿ ಅನಧಿಕೃತ ಅಂಗಡಿಗಳಿದ್ದು ಅದನ್ನೂ ತೆರವು ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಿದ್ರೂ ಪಾಲಿಕೆಯ ವಿರುದ್ಧದ ಬೀದಿ ಬದಿ ವ್ಯಾಪಾರಿಗಳ ಹೋರಾಟ ಮುಂದುವರೆಯಲಿದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. ಪ್ರತಿಭಟನೆಯ ನಡುವೆಯೂ ಕಾರ್ಯಾಚರಣೆ ಮುಂದುವರಿಸಿದ ಪಾಲಿಕೆಯಿಂದ ಸ್ಟೇಟ್ ಬ್ಯಾಂಕ್ ಬಳಿಯ ಫುಟ್ ಪಾತ್ ತೆರವು ಮಾಡಲಾಗಿದೆ. ಫುಟ್ ಪಾತ್ ತೆರವು ವೇಳೆ ಸಾಕಷ್ಟು ಪ್ರಮಾಣದಲ್ಲಿ ಶೇಖರಣೆಯಾಗಿದ್ದ ಗಲೀಜನ್ನು ಪಾಲಿಕೆ ಕಾರ್ಮಿಕರು ಸ್ವಚ್ಚಗೊಳಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆಯ ಸಮೀಪ ಇದ್ದ ತರಕಾರಿ, ಹಣ್ಣು ಹಂಪಲು ಹಾಗೂ ಸಣ್ಣ ದಿನಿಸಿ ವ್ಯಾಪಾರಿಗಳ ಅಂಗಡಿಗಳ ತೆರವು ಮಾಡುವ ವೇಳೆ ಇದು ಕಂಡು ಬಂದಿದೆ. ವ್ಯಾಪಾರ ಮಾಡುವ ಸ್ಥಳವನ್ನು ಕ್ಲೀನ್ ಮಾಡದೇ ಕಸದ ರಾಶಿಯಲ್ಲೇ ವ್ಯಾಪಾರ ನಡೆಸ್ತಾ ಇದ್ದ ಬಗ್ಗೆ ಸಾರ್ವಜನಿಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.