ಮಂಗಳೂರು : ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಲಾ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಪ್ರಣವನಾಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂಕೋಲಾ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರು ಒಂದೇ ಸಮುದಾಯಕ್ಕೆ ಸೇರಿದವರು. ಅವರೆಲ್ಲರೂ ಬಿಲ್ಲವ ,ಈಡಿಗ ನಾಮಧಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮೃತಪಟ್ಟ ಎಂಟು ಮಂದಿಯಲ್ಲಿ ಕೆಲವರ ಶವ ಈಗಾಗಲೇ ಸಿಕ್ಕಿದೆ. ಆಡಳಿತ, ವಿಪಕ್ಷ ನಾಯಕರು ಘಟನಾ ಸ್ಥಳಕ್ಕೆ ಮಾತ್ರ ಭೇಟಿ ನೀಡುತ್ತಿದ್ದಾರೆ. ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಜಿಲ್ಲಾಡಳಿತ ಸಂಪೂರ್ಣ ವೈಫಲ್ಯ ಅಗಿದೆ, ಡಿಸಿ ಗೆ ಸ್ವಲ್ಪವೂ ಮಾನವೀಯತೆ ಇಲ್ಲ. ಮೃತಪಟ್ಟವರು ನಾಮಧಾರಿತ ಈಡಿಗ ಸಮಾಜಕ್ಕೆ ಸೇರಿದವರು, ಈ ಕಾರಣಕ್ಕಾಗಿ ನಿರ್ಲಕ್ಷ್ಯ ಮಾಡ್ತಿದ್ದಾರೆ ಎಂದು ಆರೋಪಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದ ಖಾಸಗಿ ಕಂಪೆನಿ ಈ ಘಟನೆಗೆ ಕಾರಣ. ಇದು ಭ್ರಷ್ಟಾಚಾರ ಕಾಮಗಾರಿ, ದೇಶ ಲೂಟಿ ಹೊಡೆದ ಕಾಮಗಾರಿ, ಇಲ್ಲಿ ಯಾವುದೇ ಸುರಕ್ಷ ಮಾನದಂಡಗಳಿಲ್ಲ. ಗುತ್ತಿಗೆ ಕಂಪೆನಿ ವಿರುದ್ಧ ಈಗಾಗಲೇ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಕೊಲೆ ಕೇಸ್ ಹಾಕಬೇಕು. ಸಾವನ್ನಪ್ಪಿದ ಕುಟುಂಬಕ್ಕೆ ಖಾಸಗಿ ಕಂಪೆನಿ ಕಡೆಯಿಂದ ಒಂದು ಕೋಟಿ ಪರಿಹಾರ ನೀಡಬೇಕು. ಅಲ್ಲದೇ ಉತ್ತರ ಕನ್ನಡ ಡಿಸಿಯನ್ನು ಅಮಾನತು ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರದ ವೈಫಲ್ಯಗಳು ಈ ಘಟನೆಗೆ ಕಾರಣ ಆಗಿದ್ದು ಹೀಗಾಗಿ ಈಡಿಗ ನಾಮಧಾರಿ ಸಮುದಾಯದವರನ್ನು ಸೇರಿಕೊಂಡು ಜುಲೈ 28 ರಂದು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.