ರಿಪ್ಪನ್ ಪೇಟೆ : ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿತವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಹೊಟ್ಯಾಳಪುರದಲ್ಲಿ ನಡೆದಿದೆ. ರಾತ್ರಿ ಸುರಿದ ಮಳೆಗೆ ಮನೆಯ ಛಾವಣಿ ಹಾಗೂ ಗೋಡೆ ಕುಸಿದಿದೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಶಬ್ದ ಬಂದಿದ್ದರಿಂದ ನೋಡಿದಾಗ ಮನೆ ಗೋಡೆ ಕುಸಿದಿದ್ದು , ಕುಟುಂಬ ಸುರಕ್ಷಿತವಾಗಿ ಪಾರಾಗಿದೆ.
ಹೊಟ್ಯಾಳಪುರ ಗ್ರಾಮದ ಪ್ರಭಾಕರ್ ಎಂಬುವವರ ಮನೆಯ ಗೋಡೆ ಕುಸಿದಿದೆ, ಮಳೆಯ ರಭಸಕ್ಕೆ ಮನೆಯೊಳಗಿನ ಅಡುಗೆ ಮನೆ ಪಕ್ಕದ ಗೋಡೆ ಕುಸಿದಿದ್ದು , ಸಂಪೂರ್ಣ ಮನೆ ಕುಸಿಯುವ ಹಂತದಲ್ಲಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಶಿಥಿಲಾವಸ್ಥೆಯಲ್ಲಿರುವ ಮನೆಯ ಎಲ್ಲಾ ಗೋಡೆಗಳು ಕುಸಿಯುವ ಹಂತದಲ್ಲಿದ್ದೂ ಸಂಬಂಧಪಟ್ಟವರು ಕೂಡಲೇ ಬಡ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮುಂದಾಗುವ ಭಾರಿ ಅನಾಹುತವನ್ನು ತಪ್ಪಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭಾರಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನಮರ – ಅಪಾರ ಹಾನಿ
ರಿಪ್ಪನ್ ಪೇಟೆಯ ಕೋಡೂರು ಗ್ರಾಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಅರಗೋಡಿ ನಾಗರಾಜ್ ಎಂಬುವವರ ವಾಸದ ಮನೆ ಮೇಲೆ ಮಂಗಳವಾರ ಮಧ್ಯಾಹ್ನ ತೆಂಗಿನಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.
ಭಾರಿ ಗಾಳಿಯೊಂದಿಗೆ ಸುರಿದ ಮಳೆಗೆ ಮನೆ ಮುಂದೆ ಇದ್ದ ತೆಂಗಿನಮರ ಬುಡ ಸಮೇತವಾಗಿ ಮನೆಯ ಮೇಲೆ ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕೋಡೂರು ಗ್ರಾಪಂ ಸದಸ್ಯ ಯೋಗೇಂದ್ರಪ್ಪ, ಪಿಡಿಒ ನಾಗರಾಜ್, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.