ಬೆಂಗಳೂರು : ಬೆಳ್ಳಂ ಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಶಾಕ್ ಕೊಟ್ಟಿದ್ದಾರೆ. ಹೌದು,ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ರಾಜ್ಯದಲ್ಲಿ 9 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. 11 ಪ್ರಕರಣಗಳಿಗೆ ಸಂಬಂಧಿಸಿ ಸುಮಾರು 100 ಅಧಿಕಾರಿಗಳು 56 ಕಡೆ ನಡೆದ ದಾಳಿಗಳಲ್ಲಿ ಪಾಲ್ಗೊಂಡಿದ್ದಾರೆ. ಮಂಡ್ಯ, ಕಲಬುರಗಿ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಕೋಲಾರ, ಮೈಸೂರು, ಹಾಸನ, ಬೆಂಗಳೂರು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು, ಬೆಳಗಾಗುವ ಮುನ್ನವೇ ತಂಡ ಕಟ್ಟಿಕೊಂಡು ದಾಳಿ ನಡೆಸಿದರು. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಇವರ ತಪಾಸಣೆ ನಡೆದಿದೆ.
ಚಿತ್ರದುರ್ಗದಲ್ಲಿ ಸಣ್ಣ ನೀರಾವರಿ ಇಲಾಖೆ ನಿವೃತ್ತ ಚೀಫ್ ಇಂಜಿನಿಯರ್ ಎಂ. ರವೀಂದ್ರ, ಧಾರವಾಡದಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಶೇಖರ ಗೌಡ, ಬೆಳಗಾವಿಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹಾದೇವ ಬನ್ನೂರ್, ಕಲಬುರಗಿಯಲ್ಲಿ ಬಿಬಿಎಂಪಿ ರೆವಿನ್ಯೂ ಅಧಿಕಾರಿ ಬಸವರಾಜ ಮಾಗಿ, ಮಂಡ್ಯದಲ್ಲಿ ಗ್ರಾಮೀಣ ನೀರು ಸರಬರಾಜು ನಿವೃತ್ತ ಎಕ್ಷಿಕ್ಯೂಟಿವ್ ಇಂಜಿನಿಯರ್ ಶಿವರಾಜು ಎಸ್., ದಾವಣೆಗೆರೆಯಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಡಿ.ಎಚ್ ಉಮೇಶ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂ.ಎಸ್ ಪ್ರಭಾಕರ್, ಮೈಸೂರಿನಲ್ಲಿ ಸೂಪರಿಂಟೆಂಡೆಂಟ್ ಇಂಜಿಯರ್ ಮಹೇಶ್ ಕೆ., ಹಾಸನದಲ್ಲಿ ಸೆಕ್ರೆಟರಿ ಎನ್.ಎಂ ಜಗದೀಶ್, ಚಿತ್ರದುರ್ಗದಲ್ಲಿ ಸೂಪರಿಂಟೆಂಡೆಂಟ್ ಇಂಜಿಯರ್ ಕೆ.ಜಿ ಜಗದೀಶ್ ಇವರುಗಳ ಮನೆಗಳು, ಕಚೇರಿಗಳು ಹಾಗೂ ಇತರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ನಿನ್ನೆ ತಾನೇ ವಾಲ್ಮೀಕಿ ಹಗರಣದಲ್ಲಿ ಆರೋಪಿಗಳಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ, ಶಾಸಕ ಬಸವನಗೌಡ ದದ್ದಲ್ ಮನೆಗಳ ಮೇಲೆ ಇಡಿ, ಸಿಬಿಐ ರೇಡ್ ನಡೆದಿತ್ತು. ಯೂನಿಯನ್ ಬ್ಯಾಂಕ್ ಅಧಿಕಾರಿಗಳ ಮನೆಗಳ ಮೇಲೆ ಇಡಿ, ಆರ್ಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯ ಪರಿಶೀಲನೆ ಇನ್ನೂ ನಡೆಯುತ್ತಿರುವಾಗಲೇ ಲೋಕಾಯುಕ್ತ ರೇಡ್ ನಡೆದಿದೆ