ಉಡುಪಿ : ವಿಶ್ವ ಕಪ್ಪನ್ನು ಒಂದು ಭಯಾನಕ ಕ್ಯಾಚ್ ನ ಮೂಲಕ ಗೆಲ್ಲಿಸಿ ಕೊಟ್ಟ ಟೀಮ್ ಇಂಡಿಯಾದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದಿವೀಶಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದರು.
ಸೋಮವಾರ ಮಂಗಳೂರಿಗೆ ಆಗಮಿಸಿದ್ದ ಸೂರ್ಯ ಮತ್ತು ದಿವೀಶಾ ಶೆಟ್ಟಿ ವಿಮಾನ ನಿಲ್ದಾಣದಲ್ಲಿ ಕೇಕ್ ಕತ್ತರಿಸಿ ತಮ್ಮ, 8ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿದ್ದರು. ಮಂಗಳವಾರ ಉಡುಪಿಗೆ ಭೇಟಿ ನೀಡಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೀವಿಶಾ ಶೆಟ್ಟಿ ಅವರು ಕರಾವಳಿ ಮೂಲದವರಾಗಿದ್ದು, ಚೆನ್ನಾಗಿ ತುಳು ಮಾತಾಡುತ್ತಾರೆ. ಕಾಪು ಮಾರಿಗುಡಿಯಲ್ಲಿಯೂ ಇಲ್ಲಿನ ಅರ್ಚಕರ ಜತೆ ತುಳುವಿನಲ್ಲಿಯೇ ಮಾತನಾಡಿದ್ದು ವಿಡಿಯೊದಲ್ಲಿ ಕಾಣಬಹುದಾಗಿದೆ. ಮಲ್ಲಿಗೆ ಹೂವಿನ ಮಾಲೆಯನ್ನು ನೀಡಿ ತಮ್ಮ ಹರೆಕೆಯನ್ನು ತೀರಿಸಿಕೊಂಡರು. ಸೂರ್ಯಕುಮಾರ್ ಕೂಡ ಈ ಹಿಂದೆ ತುಳುವಿನಲ್ಲಿ ಮಾತನಾಡುವ ವೀಡಿಯೊ ವೈರಲ್ ಆಗಿತ್ತು. ಒಟ್ಟಾರೆ ತುಳುನಾಡಿದ ನಂಟನ್ನು ದೀವಿಶಾ ಶೆಟ್ಟಿ ಇನ್ನೂ ಕೂಡ ಮುಂದುವರಿಸಿದ್ದಾರೆ.
ಟಿ20 ವಿಶ್ವಕಪ್ಗೂ ಮುನ್ನ ಸೂರ್ಯಕುಮಾರ್ ಯಾದವ್ ಭಾರತ ತಂಡ ಟ್ರೋಫಿ ಗೆಲ್ಲಲು ವಿಶೇಷ ಹರಕೆ ಹೊತ್ತಿದ್ದರು. ಈ ಹರಕೆ ತೀರಿಸಲು ಇದೀಗ ಕಾಪುವಿನ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಈ ವೇಳೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ನೂತನವಾಗಿ ನಿರ್ಮಾಣವಾಗುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನಿರ್ಮಾಣ, ಕೆತ್ತನೆ ಶಿಲ್ಪಕಲೆಯ ಬಗ್ಗೆ ಸೂರ್ಯಕುಮಾರ್ ಮಾಹಿತಿ ಪಡೆದರು. ಸುಮಾರು 40 ಕೋಟಿ ರುಪಾಯಿ ವೆಚ್ಚದಲ್ಲಿ ಇಳಕಲ್ ಶಿಲೆಯಲ್ಲಿ ಈ ದೇವಸ್ತಾನ ನಿರ್ಮಾಣವಾಗುತ್ತಿದೆ. ಗರ್ಭಗುಡಿ, ಉಚ್ಚಂಗಿ ಗುಡಿ, ಸುತ್ತುಪೌಳಿ ಕಾಮಗಾರಿ ಶೇ.90 ಪೂರ್ಣಗೊಂಡಿದೆ.


