ಮಂಗಳೂರು : ಒಂದು ಕಾಲದ ಭಾರತದ ಹೆಸರಾಂತ ಟೆಲಿಕಾಂ ಕಂಪೆನಿ ಬಿಎಸ್ ಎನ್ ಎಲ್ ಗೆ ಅರ್ಥಿಕ ಹೊಡೆತ ಬಿದ್ದಿದೇಯಾ ಎಂಬ ಅನುಮಾನ ವ್ಯಕ್ತವಾಗಿದೆ. ನಷ್ಟದಲ್ಲಿರುವ ಬಿಎಸ್ಸೆನ್ನೆಲ್ ಸಂಚಾರ ನಿಗಮ್ ಲಿಮಿಟೆಡ್ ಸಂಸ್ಥೆ ತನ್ನ ಆದಾಯ ಹೆಚ್ಚಿಸಿಕೊಳ್ಳಲು, ದಶಕಗಳ ಹಿಂದೆ ತಾನು ಖರೀದಿ ಮಾಡಿದ ಆಸ್ತಿಗಳ ಮಾರಾಟಕ್ಕೆ ಮುಂದಾಗಿದೆ ಎಂಬ ಮಾಹಿತಿ ತಿಳಿದಿದೆ.
ಮೊದಲ ಹಂತದಲ್ಲಿ ನಗರದ ಕದ್ರಿ ಪಾರ್ಕ್ ಬಳಿ ಇರುವ ಬಿಎಸ್ಸೆನ್ನೆಲ್ ಸ್ಟೋರ್ ಯಾರ್ಡ್‌ನ 2 ಎಕರೆ ಜಾಗ ಮಾರಾಟ ಮಾಡಲು ಉದ್ದೇಶಿಸಿದ್ದು, ಅದಕ್ಕಾಗಿ ಬಿಡ್ ಆಹ್ವಾನಿಸಿದೆ. ಬಿಡ್ ಸಲ್ಲಿಕೆಗೆ ಜು.1 ಕೊನೆ ದಿನವಾಗಿದೆ.
8094 ಚದರ ಮೀಟರ್ ವಿಸ್ತೀರ್ಣ ಇರುವ ಸ್ಟೋರ್ ಯಾರ್ಡ್ ಜಾಗದ ಮೀಸಲು ಬೆಲೆ 39 ಕೋಟಿ ರು. ಆಗಿದೆ ಇನ್ನಷ್ಟು ಆಸ್ತಿ ಮಾರಾಟಕ್ಕೆ ಮುಂದಾಗಿರುವ ಬಿಎಸ್ ಎನ್ ಎಲ್ ಸಂಸ್ಥೆ ಎರಡನೇ ಹಂತದಲ್ಲಿ ಬಜಾಲ್‌ನಲ್ಲಿರುವ 30 ಸೆಂಟ್ಸ್ ವಿಸ್ತೀರ್ಣದ ಬಿಟಿಎಸ್ ಸೈಟ್, ಕುಂಜತ್ತಬೈಲ್‌ನಲ್ಲಿರುವ 20,592 ಚದರ ಮೀಟರ್ ವಿಸ್ತೀರ್ಣದ ಮೈಕ್ರೋವೇವ್ ಸ್ಟಾಫ್ ಕ್ವಾಟ್ರಸ್ ಜಾಗ, ಬೋಳಾರ ಟೆಲಿಫೋನ್ ಎಕ್ಸ್‌ಚೇಂಜ್ ಕಂಪೌಂಡ್ 13 ಸೆಂಟ್ಸ್ ಜಾಗ ಮಾರಾಟಕ್ಕೆ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಬಿಎಸ್ಸೆನ್ನೆಲ್ ಕರ್ನಾಟಕ ಸರ್ಕಲ್‌ನ ಸಿಜಿಎಂ ಉಜ್ವಲ್ ಗುಲ್ಹಾನೆ ಮಾಹಿತಿ ನೀಡಿದ್ದಾರೆ.