ಮುಲ್ಕಿ : ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ಗೇರುಕಟ್ಟೆ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಂತರ್ಜಲ ವೃದ್ಧಿಯ ಕೆರೆ ಅಭಿವೃದ್ಧಿ ಕಾಮಗಾರಿ ಎರಡನೇ ಬಾರಿ ಕಳಪೆಯಾಗಿದ್ದು ಮಳೆಗಾಲ ಆರಂಭವಾಗುತ್ತಲೇ ಕುಸಿತ ಕಂಡಿದೆಅಂತರ್ಜಲ ವೃದ್ಧಿಗೆ ಮುಲ್ಕಿ ನಗರ ಪಂಚಾಯತಿಯ 2017-18 ನೇ ಸಾಲಿನ 14ನೇ ಹಣಕಾಸು ಯೋಜನೆಯಲ್ಲಿ ಸುಮಾರು 1.75 ಲಕ್ಷ ವೆಚ್ಚದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಪ್ರಥಮವಾಗಿ ನಡೆದಿದ್ದು, ಬಳಿಕ 2020 -21ರಲ್ಲಿ ಸುಮಾರು 6 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆದಿತ್ತು.
ಬಳಿಕ ಮಂಗಳೂರಿನ ಮುಡಾದವರು ಲಕ್ಷಾಂತರ ವೆಚ್ಚದಲ್ಲಿ ನಡೆಸಿದ ತಡೆಗೋಡೆ ನಿರ್ಮಾಣ ಕಾಮಗಾರಿ ತೀರಾ ಕಳಪೆಯಾಗಿ ಕೆರೆಯ ಬದಿ ಕುಸಿತದ ಭೀತಿ ಎದುರಿಸುತ್ತಿರುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸಹಿತ ಅನೇಕ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಎಚ್ಚೆತ್ತ ಮೂಡಾ ಅಧಿಕಾರಿಗಳು ಕಳೆದ ಬೇಸಿಗೆಯಲ್ಲಿ ಸರಿಪಡಿಸಿದ್ದರು ಆದರೆ ಮಳೆಗಾಲ ಆರಂಭವಾಗುತ್ತಲೇ ಕೆರೆಯ ಬದಿಯ ನೂತನ ತಡೆಗೋಡೆ ಕುಸಿತ ಕಂಡಿದ್ದು ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. ಕೆರೆಯ ಬದಿಯ ಹೆದ್ದಾರಿ ಚರಂಡಿಯಲ್ಲಿ ಕೆಲವರು ತ್ಯಾಜ್ಯ ಬಿಸಾಡುತ್ತಿದ್ದು ಇದೇ ನೀರು ಕೆರೆಗೆ ಹರಿದು ರೋಗಗಳ ಭೀತಿ ಎದುರಾಗಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಮಾತನಾಡಿ ಮೂಡಾ ವತಿಯಿಂದ ಎರಡನೇ ಬಾರಿ ನಡೆದ ಅಂತರ್ಜಲ ವೃದ್ಧಿ ಕೆರೆ ಕಾಮಗಾರಿ ಕಳಪೆಯಾಗಿದ್ದು, ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.