ಮಂಗಳೂರು : ಬಿಜೆಪಿ ಏರ್ಪಡಿಸಿದ್ದ ವಿಜಯೋತ್ಸವ ಕಾರ್ಯಕರ್ಮ ಮುಗಿಸಿ ಹೊರಡೋ ಸಮಯದಲ್ಲಿ ಬೋಲೋ ಭಾರತ್ ಮಾತಾ ಕಿ ಜೈ ಎಂದಿದ್ದಕ್ಕೆ ಸುಮಾರು ೨೫ ಕ್ಕೂ ಹೆಚ್ಚು ಯುವಕರು ಹಿಂಬಾಲಿಸಿ ಅಡ್ಡಾಡಿಸಿ ಚೂರಿ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್ ನಲ್ಲಿ ನಿನ್ನೆ ರಾತ್ರೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಾಕೀರ್(28), ಅಬ್ದುಲ್ ರಜಾಕ್(40), ಅಬೂಬಕ್ಕರ್ ಸಿದ್ದಿಕ್(35), ಸವಾದ್(18), ಹಫೀಝ್(24) ರನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್ ಎಂಬಲ್ಲಿ ನಿನ್ನೆ ರಾತ್ರಿ ಭಾರತ್ ಮಾತಕೀ ಜೈ ಘೋಷಣೆ ಕೂಗಿದ ವಿಚಾರಕ್ಕೆ ಚೂರಿ ಇರಿಯಲಾಗಿತ್ತು. ಹರೀಶ್ ಮತ್ತು ನಂದ ಕುಮಾರ್ ಚೂರಿ ಇರಿತಕ್ಕೆ ಒಳಗಾದವರು. ನಿನ್ನೆ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿದ್ದ ಹಿನ್ನಲೆಯಲ್ಲಿ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರ ಸಂತೋಷ ಮುಗಿಲುಮುಟ್ಟಿತ್ತು. ಆದರೆ ಈ ವೇಳೆ ಮಂಗಳೂರಿನಲ್ಲಿ ಇಬ್ಬರಿಗೆ ಚೂರಿಯಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಮಸೀದಿ ಮುಂದೆ ಪ್ರಚೋದನಕಾರಿ ಘೋಷಣೆ ಕೂಗಿದಾರೆಂದು ಬೋಳಿಯಾರ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ.ಅಬ್ದುಲ್ಲಾ ರಿಂದ ಪೊಲೀಸ್ ದೂರು ನೀಡಲಾಗಿದೆ. ಮಸೀದಿಯ ಹೊರಗೆ ನಿಂತಿದ್ದ ಜನರನ್ನು ನಿಂದಿಸಿದ ಆರೋಪ ಕೂಡ ಮಾಡಲಾಗಿದೆ. ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಕೊಣಾಜೆ ಠಾಣೆ ಪೊಲೀಸರು, ಆರೋಪಿಗಳಾದ ಸುರೇಶ್, ವಿನಯ್, ಸುಭಾಷ್, ರಂಜಿತ್, ಧನಂಜಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಮೂರ್ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಪ್ರಕಾರ ಕ್ರಮವಾಗುತ್ತಿರುವಾಗ ನಮ್ಮ ಹಸ್ತಕ್ಷೇಪವಿಲ್ಲ. ನಿಷ್ಪಕ್ಷಪಾತವಾಗಿ ಕ್ರಮವಾಗುತ್ತೆ, ಇದರಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ ಎಂದಿದ್ದಾರೆ.ಕಾನೂನು ಕೈಗೆ ತೆಗೆದುಕೊಂಡವರ ಮೇಲೆ ಕಾನೂನು ಕ್ರಮ ಆಗಬೇಕು. ಇಂತಹ ಘಟನೆ ಆದಾಗ ಸರ್ಕಾರ ರಾಜಕಾರಣಿಗಳು ತಟಸ್ಥವಾಗಿರಬೇಕು ಎಂದು ಹೇಳಿದ್ದಾರೆ.