ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಸಾಗಿಸುತ್ತಿದ್ದ ನಿಷೇಧಿತ MDMA ಮಾದಕ ದ್ರವ್ಯವನ್ನು ಸಾಗಿಸುತ್ತಿದ್ದ ನಾಲ್ವರು ಮಾದಕ ದ್ರವ್ಯ ದಂಧೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ 270 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಪಡೆದ ಪೊಲೀಸರು ಮಂಗಳೂರಿನ ದೇರಳಕಟ್ಟೆಯಲ್ಲಿ ದಂಧೆಕೋರರು ಚಲಾಯಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮಂಗಳೂರಿನ ಬಿಜೈ ಚರ್ಚ್ ಸಮೀಪದ ಬಿಜೈ ಹೊಸ ರಸ್ತೆಯ ನಿವಾಸಿ ಮೊಹಮ್ಮದ್ ಅಮೀನ್ ರಫಿ (23) ಮಂಗಳೂರು ಅಡ್ಡೂರು ಗ್ರಾಮದ ಬಂಡಸಾಲೆ ಮನೆಯಲ್ಲಿ ವಾಸ ಮಹಮ್ಮದ್ ಸಿನಾನ್ ಅಬ್ದುಲ್ಲಾ (23); ಬಾವ ಮಹಲ್, ಬಂದರ್ ಮಂಗಳೂರು ಜೆಎಂ ಕ್ರಾಸ್ ರಸ್ತೆಯಲ್ಲಿ ವಾಸವಾಗಿರುವ ಮಹಮ್ಮದ್ ನೌಮಾನ್ (22), ಉಳ್ಳಾಲದ ಬೋಳಿಯಾರ್ ಗ್ರಾಮದ ಸ್ಟೋರ್ ಹೌಸ್ ಬಳಿಯ ಕಂಡಿಮಾರ್ ಹೌಸ್ ನಿವಾಸಿ ಮಹಮ್ಮದ್ ಸಫೀಲ್ (23) ಎಂದು ಗುರುತಿಸಲಾಗಿದೆ.
ಆರೋಪಿಯಿಂದ 6,50,000 ರೂಪಾಯಿ ಮೌಲ್ಯದ 270 ಗ್ರಾಂ ಎಂಡಿಎಂಎ ಡ್ರಗ್ಸ್, ನಾಲ್ಕು ಮೊಬೈಲ್ ಫೋನ್ ಹ್ಯಾಂಡ್ ಸೆಟ್, ಟೊಯೊಟಾ ಕರೋಲಾ ಕಾರು ಮತ್ತು ಡಿಜಿಟಲ್ ತೂಕದ ಮಾಪಕ ಸೇರಿ 14,85,500 ರೂಪಾಯಿ ಮೌಲ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿ ಮಾದಕ ವಸ್ತು ಖರೀದಿಸಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಪೈಕಿ ಮೊಹಮ್ಮದ್ ರಫಿ ವಿರುದ್ಧ 2021ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ದಂಧೆ ಪ್ರಕರಣ ದಾಖಲಾಗಿದೆ.
ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್ ಐ ಶರಣಪ್ಪ ಭಂಡಾರಿ ಹಾಗೂ ಸಿಸಿಬಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.