ಚೆನ್ನೈ : ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿರುವ ಶ್ರೀಗಂಧದ ಕಳ್ಳಸಾಗಾಣಿಕೆದಾರ ಹಾಗೂ ಡಕಾಯಿತ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶನಿವಾರ ಹೇಳಿದ್ದಾರೆ.
ವೃತ್ತಿಯಲ್ಲಿ ವಕೀಲರಾದ ವಿದ್ಯಾರಾಣಿ ಅವರು ಜುಲೈ 2020 ರಲ್ಲಿ ಬಿಜೆಪಿಗೆ ಸೇರಿದರು ಮತ್ತು ಅದರ ಬಿಜೆಪಿ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡರು ಆದರೆ ಇತ್ತೀಚೆಗೆ ಕೇಸರಿ ಪಕ್ಷವನ್ನು ತೊರೆದು ನಟ-ನಿರ್ದೇಶಕ ಸೀಮಾನ್ ನೇತೃತ್ವದ ಎನ್‌ಟಿಕೆಗೆ ಸೇರಿದ್ದಾರೆ. ಅವರು ಕಾರ್ಯಕರ್ತೆಯೂ ಆಗಿದ್ದು, ಆದಿವಾಸಿಗಳು ಮತ್ತು ದಲಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಸೀಮಾನ್ ನೇತೃತ್ವದ ಎನ್‌ಟಿಕೆ ಪಕ್ಷದಿಂದ ತಮಿಳುನಾಡು ಮತ್ತು ಪದುಚೇರಿಯಲ್ಲಿ ಒಟ್ಟು 40 ಅಭ್ಯರ್ಥಿಗಳು ಈ ಬಾರಿ ಚುನಾವಣೆಗೆ ನಿಂತಿದ್ದಾರೆ. ಎನ್‌ಟಿಕೆಯಿಂದ ಕಣಕ್ಕಿಳಿದ 40 ಅಭ್ಯರ್ಥಿಗಳಲ್ಲಿ ಅರ್ಧದಷ್ಟು ಮಹಿಳೆಯರಾಗಿದ್ದಾರೆ. ಎನ್‌ಟಿಕೆ ಪಕ್ಷವು ಹತ್ಯೆಯಾದ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಸಿದ್ದಾಂತವನ್ನು ಅನುಸರಿಸುತ್ತದೆ.
ನಾಮ್ ತಮಿಳರ್ ಕಚ್ಚಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ವಿದ್ಯಾ ರಾಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನ್ನ ತಂದೆ ಜನರ ಸೇವೆ ಮಾಡಲು ಬಯಸಿದ್ದರು ಆದರೆ ಅವರು ಅದನ್ನು ಮಾಡಲು ಆರಿಸಿಕೊಂಡ ರೀತಿ ನ್ಯಾಯಯುತವಾಗಿಲ್ಲ ಎಂದು ಹೇಳಿದ ಅವರು, ಜನರ ಸೇವೆಗಾಗಿ ತಾನು ರಾಜಕೀಯಕ್ಕೆ ಸೇರಿದ್ದೇನೆ ಎಂದು ಹೇಳಿದರು. ಕುಖ್ಯಾತ ಡಕಾಯಿತ ವೀರಪ್ಪನ್ 2004 ರಲ್ಲಿ ತಮಿಳುನಾಡು ಪೊಲೀಸರ ವಿಶೇಷ ಕಾರ್ಯಪಡೆಯ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು.


