ಬೆಂಗಳೂರು : ಬಾಂಬೆ ಮಿಠಾಯಿಗಳಿಗೆ ಬಣ್ಣ ಬಳಕೆ ಮಾಡುವುದಕ್ಕೆ ನಿಷೇಧ ಹೇರಿದ ಬೆನ್ನಲ್ಲೇ ಗ್ರಾಹಕರ ರುಚಿಕರ ಆಹಾರವಾಗಿರುವ ಪಾನಿಪೂರಿ ಹಾಗೂ ಕಬಾಬ್ ಅನ್ನು ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ರುಚಿಕರವಾಗಿರುವುದರಿಂದ ಕಬಾಬ್ ಹಾಗೂ ಪಾನಿಪೂರಿಯನ್ನು ಜನತೆ ಹೆಚ್ಚೆಚ್ಚು ಸೇವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಬಾಬ್, ಪಾನಿಪುರಿಯನ್ನು ಪರೀಕ್ಷೆಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಬಾಬ್, ಪಾನಿಪುರಿಯ ಬಳಕೆಯನ್ನು ಪರಿಶೀಲಿಸಿ ಈ ತಿಂಗಳ ಅಂತ್ಯದಲ್ಲಿಯೇ ವರದಿ ಪ್ರಕಟಿಸಿ ಕ್ರಮಕ್ಕೆ ಮುಂದಾಗಲಿದೆ. ಕಳೆದ ಕೆಲದಿನಗಳ ಹಿಂದಷ್ಟೆ ಆಹಾರ ಮತ್ತು ಸುರಕ್ಷತಾ ಇಲಾಖೆ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನು ಪರೀಕ್ಷಿಸಿ ಅದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆ ಮಾಡಿ ಬಣ್ಣಗಳ ಬಳಕೆ ಮಾಡುವುದನ್ನು ನಿಷೇಧ ಮಾಡಿದೆ.
ಆರೋಗ್ಯ ಸಚಿವರು ಸಹ ಗೋಬಿಗೆ ಮೂರು ಬಗೆಯ ಕಲರ್‌ಗಳನ್ನು ಬಳಕೆ ಮಾಡಬಾರದು ಎಂದು ಆದೇಶ ಮಾಡಿದ್ದಾರೆ. ಈಗ ಆಹಾರ ಮತ್ತು ಸುರಕ್ಷತಾ ಇಲಾಖೆ ಕಬಾಬ್ ಮತ್ತು ಪಾನಿಪುರಿ ಬಳಕೆ ಮಾಡುತ್ತಿರುವ ಕಲರ್ ಮತ್ತು ಕಲಬೆರಕೆಯ ಬಗ್ಗೆ ತಪಾಸಣೆ ಮಾಡಲು ಮುಂದಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಕುರಿತು ಮಾದರಿ ಸಂಗ್ರಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.